ಸಾರಾಂಶ
ಕಾರ್ಮಿಕರು 8 ಗಂಟೆ ಕೆಲಸದ ಅವಧಿಗಾಗಿ ಅಮೆರಿಕಾದ ಚಿಕಾಗೋದಲ್ಲಿ ನಡೆಸಿದ ಹೋರಾಟದ ಫಲವಾಗಿ ಪಡೆದ ಹಕ್ಕುಗಳನ್ನು ಕೇಂದ್ರ ಸರ್ಕಾರ ಕನಿಷ್ಠ 12ರಿಂದ 14 ಗಂಟೆ ದುಡಿಯಬೇಕೆಂಬ ಫಾರ್ಮಾನು ಹೊರಡಿಸಿ ಕಿತ್ತುಕೊಂಡು ಕಾರ್ಮಿಕರನ್ನು ಮತ್ತೆ ಗುಲಾಮಗಿರಿಗೆ ತಳ್ಳಲು ಯತ್ನಿಸುತ್ತಿದೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್ ಹೇಳಿದರು.
ಸಿಪಿಐ, ಎಐಟಿಯುಸಿಯಿಂದ ಕಾರ್ಮಿಕ ದಿನ । ದೇಶದ ಜನರನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲ
ಕನ್ನಡಪ್ರಭ ವಾರ್ತೆ ದಾವಣಗೆರೆಕಳೆದ 1886ಕ್ಕೂ ಮುನ್ನ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತಮನದ ವರೆಗೂ ದುಡಿಸಿಕೊಂಡು ಕಾರ್ಮಿಕರು ಮತ್ತು ರೈತರ ಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಇದರ ವಿರುದ್ಧ ಸಿಡಿದೆದ್ದ ಕಾರ್ಮಿಕರು 8 ಗಂಟೆ ಕೆಲಸದ ಅವಧಿಗಾಗಿ ಅಮೆರಿಕಾದ ಚಿಕಾಗೋದಲ್ಲಿ ನಡೆಸಿದ ಹೋರಾಟದ ಫಲವಾಗಿ ಪಡೆದ ಹಕ್ಕುಗಳನ್ನು ಕೇಂದ್ರ ಸರ್ಕಾರ ಕನಿಷ್ಠ 12ರಿಂದ 14 ಗಂಟೆ ದುಡಿಯಬೇಕೆಂಬ ಫಾರ್ಮಾನು ಹೊರಡಿಸಿ ಕಿತ್ತುಕೊಂಡು ಕಾರ್ಮಿಕರನ್ನು ಮತ್ತೆ ಗುಲಾಮಗಿರಿಗೆ ತಳ್ಳಲು ಯತ್ನಿಸುತ್ತಿದೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್ ಹೇಳಿದರು.ನಗರದ ಜಯದೇವ ವೃತ್ತ ಬಳಿ ಇರುವ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯಲ್ಲಿ ಗುರುವಾರ ಸಿಪಿಐ ಮತ್ತು ಎಐಟಿಯುಸಿ ಜಂಟಿಯಾಗಿ ಆಯೋಜಿಸಿದ್ದ ಮೇ ದಿನಾಚರಣೆ ಹಾಗೂ ಹುತಾತ್ಮರ 55ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಂಡವಾಳಶಾಹಿಗಳ ಪರವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀಮಂತರ ಪರವಾದ ನೀತಿಗಳನ್ನು ಜಾರಿಗೆ ತಂದು, ದೇಶದ ಕಾರ್ಮಿಕರು ಮತ್ತು ರೈತರನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರ ನಡೆಸಿದೆ ಎಂದರು. ಹೋರಾಟ ಮಾಡಿ ಪಡೆದಿದ್ದ ನೂರಾರು ಕಾರ್ಮಿಕ ಕಾಯಿದೆಗಳನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರವು ಕಾರ್ಮಿಕರಿಗೆ ಮಾರಕವಾಗುವ ರೀತಿಯಲ್ಲಿ ನಾಲ್ಕು ಸಂಹಿತೆ ತರಲು ಮುಂದಾಗಿದೆ. ಇವು ಜಾರಿಯಾದರೆ, ಈಗಿರುವ ಮುಕ್ತವಾಗಿ ಹಕ್ಕುಗಳನ್ನು ಕೇಳುವ ಸ್ವಾತಂತ್ರ್ಯವೂ ಹರಣವಾಗಿ, ಪ್ರಾಣಿಗಳಿಗಿಂತ ಹೀನವಾಗಿ ಬದುಕಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಸಂಘಟಿತರಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ತಿಳಿಸಿದರು.ದೇಶದಲ್ಲಿ ಸುರಕ್ಷತೆ ಇದೆಯಾ?:ಭಯೋತ್ಪಾದನೆ ನಿರ್ಮೂಲನೆ ಮಾಡುವುದಾಗಿ ಹೇಳಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿದ್ದರು. ಆದರೆ, ಪುಲ್ವಾಮ ದಾಳಿಯಲ್ಲಿ ಸೈನಿಕರು, ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ಉಗ್ರರು ಗುಂಡಿನ ಮಳೆ ಸುರಿದರು. ಇದೆಲ್ಲಾ ನೋಡಿದರೆ ದೇಶದಲ್ಲಿ ಸುರಕ್ಷತೆ ಇದೆಯಾ?. ಸರ್ಕಾರ ಆಂತರಿಕ ಮತ್ತು ಬಾಹ್ಯವಾಗಿಯೂ ದೇಶದ ಜನರನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿ.ಅಮ್ಜದ್ ದೂರಿದರು.ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಉಮೇಶ್ ಆವರಗೆರೆ, ಜಿ.ಯಲ್ಲಪ್ಪ, ಕೆ.ಜಿ.ಶಿವಮೂರ್ತಿ, ಟಿ.ಎಚ್. ನಾಗರಾಜ್, ಎಚ್.ಕೆ.ಕೊಟ್ರಪ್ಪ, ಮಹ್ಮದ್ ರಫೀಕ್, ಮಹಮದ್ ಬಾಷಾ, ವಿ.ಲಕ್ಷ್ಮಣ್, ಎಸ್.ಎಸ್. ಮಲ್ಲಮ್ಮ, ಜಯಪ್ಪ, ಜೈನುಲ್ಲಾ ಖಾನ್, ಸರೋಜಾ, ನರೇಗಾ ರಂಗನಾಥ್, ಪಿ.ಷಣ್ಮುಖಸ್ವಾಮಿ, ಸುರೇಶ್ ಗೌಡ, ಐರಣಿ ಚಂದ್ರು, ಕೆ.ಬಾನಪ್ಪ, ಅನೇಕರು ಭಾಗವಹಿಸಿದ್ದರು. ಉದ್ಯೋಗ ಅವಧಿ ತಿದ್ದುಪಡಿ ಕಾಯ್ದೆ ಹಿಂಪಡೆಯಿರಿ12ರಿಂದ 14 ಗಂಟೆ ಕೆಲಸ ಮಾಡಬೇಕೆಂಬ ಫಾರ್ಮಾನು ಹೊರಡಿಸಿ, ಕಾರ್ಮಿಕರು ಹೋರಾಟದ ಮೂಲಕ ಪಡೆದ ಹಕ್ಕು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ತಂದಿದ್ದ 12 ಗಂಟೆ ಕೆಲಸ ಮಾಡುವ ಉದ್ಯೋಗ ಅವಧಿ ತಿದ್ದುಪಡಿ ಕಾಯ್ದೆಯನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆಯಬೇಕು. ಕಾರ್ಮಿಕರಿಗೆ ಕನಿಷ್ಠ ಕೂಲಿಯ ಖಾತ್ರಿ ಸಹ ಇಲ್ಲವಾಗಿದೆ. ಕಾರ್ಮಿಕರು ಈಗ ಮೈಮರೆತರೆ 139 ವರ್ಷದ ಹಿಂದಿನ ಚರಿತ್ರೆಯ ಪುಟ ಸೇರಬೇಕಾದಿತು. ಬಿಜೆಪಿ ಸರ್ಕಾರದ ವಿರುದ್ಧ ಮೇ 20ರಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗವಹಿಸಿ, ಬಿಜೆಪಿಯನ್ನು ಅಧಿಕಾರ ಬಿಟ್ಟು ತೊಲಗುವಂತೆ ಮಾಡಬೇಕು. ಬಿ.ಅಮ್ಜದ್, ರಾಜ್ಯ ಉಪಾಧ್ಯಕ್ಷ, ಎಐಟಿಯುಸಿ.