ಮಾನಭಂಗಕ್ಕೆ ಯತ್ನ: ಪೋಕ್ಸೋ ಪ್ರಕರಣ ದಾಖಲಿಸಿದರೂ ಆರೋಪಿಗಳ ಬಂಧನವಿಲ್ಲ

| Published : Feb 11 2024, 01:45 AM IST

ಮಾನಭಂಗಕ್ಕೆ ಯತ್ನ: ಪೋಕ್ಸೋ ಪ್ರಕರಣ ದಾಖಲಿಸಿದರೂ ಆರೋಪಿಗಳ ಬಂಧನವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮಾನಭಂಗಕ್ಕೆ ಯತ್ನಿಸಿದ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದ್ದರೂ ಮುಂಡರಗಿ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಮತ್ತು ಇದೀಗ ಬಿ ವರದಿ ಸಲ್ಲಿಸುವ ಮೂಲಕ ಪ್ರಕರಣವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು 17 ವರ್ಷದ ಸಂತ್ರಸ್ತೆ ಹಾಗೂ ಅವಳ ಕುಟುಂಬದ ಸದಸ್ಯರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಗದಗ: ಮಾನಭಂಗಕ್ಕೆ ಯತ್ನಿಸಿದ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದ್ದರೂ ಮುಂಡರಗಿ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಮತ್ತು ಇದೀಗ ಬಿ ವರದಿ ಸಲ್ಲಿಸುವ ಮೂಲಕ ಪ್ರಕರಣವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು 17 ವರ್ಷದ ಸಂತ್ರಸ್ತೆ ಹಾಗೂ ಅವಳ ಕುಟುಂಬದ ಸದಸ್ಯರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಂತ್ರಸ್ತೆ ಹಾಗೂ ಅವಳ ಕುಟುಂಬಸ್ಥರು ಶನಿವಾರ ಇಲ್ಲಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ಕುಟುಂಬಕ್ಕೆ ಅನ್ಯಕೋಮಿನ ಯುವಕರಿಂದ ಆಗುತ್ತಿರುವ ಅನ್ಯಾಯ, ಅದನ್ನು ತಡೆಗಟ್ಟದೇ ನ್ಯಾಯ ಕೊಡಿಸಬೇಕಾದ ಮುಂಡರಗಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಕಣ್ಣೀರಿಡುತ್ತಲೇ ನೋವು ತೊಡಿಕೊಂಡರಲ್ಲದೇ ಇದೇ ಯುವಕರಿಂದ ನನ್ನ ಅಕ್ಕನೂ ತೊಂದರೆ ಅನುಭವಿಸಿದ್ದಳು, ಪ್ರಕರಣ ನ್ಯಾಯಾಲಯದಲ್ಲಿದ್ದು, ಅದರ ವಿಚಾರಣೆ ಸಂದರ್ಭದಲ್ಲಿ ನಮ್ಮ ತಂದೆ ಸಾಕ್ಷಿ ಹೇಳಬಾರದೆಂದು ಬೆದರಿಸಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಕಳೆದ ವರ್ಷದ ನ.21 ರಂದು ಮನೆಯಲ್ಲಿ ತಂದೆ, ತಾಯಿ ಯಾರೂ ಇಲ್ಲದ ಸಮಯದಲ್ಲಿ ಮುಂಡರಗಿ ಪಟ್ಟಣದ ಮೌಲಾ ಹುಸೇನ್ ಕರಣಿ ಮತ್ತು ಖಾಜಾ ಹುಸೇನ್ ಕರಣಿ ಎನ್ನುವವರು ಮನೆಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ ನನ್ನ ಮಾನಭಂಗಕ್ಕೆ ಪ್ರಯತ್ನ ಪಟ್ಟಿದ್ದಾರೆ. ಪ್ರಜ್ಞೆ ತಪ್ಪುವ ಹಾಗೆ ನನ್ನನ್ನು ಹೊಡಿದಿದ್ದಾರೆ. ಪ್ರಜ್ಞಾಹೀನಳಾಗಿದ್ದ ನನಗೆ 4 ಗಂಟೆ ನಂತರ ಪ್ರಜ್ಞೆ ಬಂದಿದೆ. ನಂತರ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದೇನೆ ಎಂದರು.

ನ. 21ರಂದೇ ಪೊಲೀಸರಿಗೆ ದೂರು ಕೊಟ್ಟಿದ್ದೇವೆ (198/2023). ನ. 30ರಂದು ಮರು ಹೇಳಿಕೆ ದೂರು ಕೊಟ್ಟು ಪೋಕ್ಸೊ ಅಡಿಯಲ್ಲಿ ದೂರು ದಾಖಲಿಸಿದ್ದೇವು. ಹೀಗಿದ್ದರೂ, ಪ್ರಕರಣವನ್ನು ಹಿಂಪಡೆಯುವಂತೆ ಪೊಲೀಸರು ನಮ್ಮ ಮೇಲೆ ಸತತವಾಗಿ ಒತ್ತಡ ಹೇರುತ್ತಿದ್ದಾರೆ. ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿದ್ದಾರೆ. ಪೋಕ್ಸೋ ಅಡಿಯಲ್ಲಿ ದೂರು ದಾಖಲಿಸಿದರೂ ಇದುವರೆಗೂ ಆರೋಪಿಯ ಬಂಧನವಾಗಿಲ್ಲ ಎಂದರು.

ಆರೋಪಿಗಳು ನಮ್ಮ ಮನೆಗೆ ಬಂದು, ನಮ್ಮನ್ನು ಯಾರೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ, ನೋಡಿ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಾರೆ ಎಂದು ಗದ್ಗದಿತರಾಗಿ ಅಳುತ್ತಲೇ ತನ್ನ ಸಂಕಟವನ್ನು ಅಪ್ರಾಪ್ತ ಬಾಲಕಿ ಬಿಚ್ಚಿಟ್ಟಳು.

ಸಂತ್ರಸ್ತೆ ತಂದೆ ಎ. ಡೊಳ್ಳಿನ ಮಾತನಾಡಿ, ಹಳೆಯ ದ್ವೇಷದಿಂದ ಆರೋಪಿತರು ಹೀಗೆ ಮಾಡುತ್ತಿದ್ದಾರೆ. 2021ರಲ್ಲಿ ನನ್ನ ಮೊದಲನೇಯ ಮಗಳಿಗೆ ಆರೋಪಿ ಮೌಲಾ ಹುಸೇನ್ ಕಿರುಕುಳ ನೀಡುತ್ತಿದ್ದ. ಕಿರುಕುಳಕ್ಕೆ ಬೇಸತ್ತ ನನ್ನ ಹಿರಿಯ ಮಗಳು ನಗರದ ಗಂಗಿಮಡಿ ಮೇಲ್ಸೇತುವೆಯಿಂದ ಬಿದ್ದು, ತೀವ್ರ ಗಾಯಗೊಂಡಿದ್ದಾಳೆ. ಕಳೆದೆರಡು ವರ್ಷದಿಂದ ಅವಳ ಆರೈಕೆ ಮಾಡುತ್ತಿದ್ದೇವೆ. ಹಿಂದಿನ ಪ್ರಕರಣದಲ್ಲಿ ಮೌಲಾ ಹುಸೇನ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಶೀಘ್ರದಲ್ಲಿ ನಾನು ಸಾಕ್ಷಿ ಹೇಳಬೇಕಿದ್ದು, ಅದನ್ನು ತಪ್ಪಿಸಲು ಹಾಗೂ ನಮ್ಮನ್ನು ಹೆದರಿಸಲು ಈ ರೀತಿ ದ್ವೇಷ ಸಾಧಿಸುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ. ಪೊಲೀಸರೂ ನಮ್ಮ ನೆರವಿಗೆ ಬರುತ್ತಿಲ್ಲ. ಮೌಲಾಹುಸೇನ ಸಹೋದರನ ಜೊತೆ ಬಂದು ಕಿರುಕುಳ ನೀಡುತ್ತಿದ್ದಾರೆ. ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.ಪೊಲೀಸರಿಂದಲೇ ಅನ್ಯಾಯ

ಮುಂಡರಗಿ ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ನಾನು ಯೋಗಪಟು, ನಿತ್ಯ ಗದಗ ನಗರದ ಯೋಗ ಶಿಕ್ಷಕ ಚೇತನ ಚುಂಚಾ ಅವರಿಂದ ಆನ್‌ಲೈನ್‌ ಮೂಲಕ ಯೋಗ ತರಬೇತಿ ಪಡೆಯುತ್ತೇನೆ. ಘಟನೆ ನಡೆದ ಸಂದರ್ಭದಲ್ಲಿ ನಾನು ಅರೇ ಪ್ರಜ್ಞಾವಸ್ಥೆಯಲ್ಲಿದ್ದಾಗ ಚೇತನ್ ಚುಂಚಾ ಅವರಿಂದ ಕರೆ ಬಂದಿದೆ. ನನಗೆ ಅರಿವಿಲ್ಲದಂತೆ ಕರೆ ರಿಸಿವ್ ಆಗಿದೆ. ಮುಂಡರಗಿ ಪೊಲೀಸರು ಇದನ್ನೇ ಮುಂದಿಟ್ಟುಕೊಂಡು ಯೋಗ ಶಿಕ್ಷಕರನ್ನು ಮತ್ತು ಅವರ ತಂದೆ ಅವರನ್ನು ಠಾಣೆಗೆ ಕರೆ ತಂದು ಚಿತ್ರ ಹಿಂಸೆ ನೀಡಿದ್ದಾರೆ. ನನಗೆ ಪ್ರಕರಣವನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ನಮ್ಮ ತಾಯಿಯ ಮೊಬೈಲ್ ಇಸಿದುಕೊಂಡು ಹೋಗಿ ಹಲವಾರು ದಿನಗಳಾದರೂ ಅದನ್ನು ಮರಳಿ ಕೊಡುತ್ತಿಲ್ಲ. ಪ್ರಕರಣದ ದಾರಿ ತಪ್ಪಿಸಿದ್ದಾರೆ. ಸಾಕ್ಷಿ ನಾಶ ಮಾಡಿದ್ದಾರೆ ಎಂದು ಸಂತ್ರಸ್ತೆ ಮತ್ತು ಕುಟುಂಬಸ್ಥರು ಆರೋಪಿಸಿದರು.ಹಲವೆಡೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೇತೃತ್ವದಲ್ಲಿ ಮುಂಡರಗಿಯಲ್ಲಿ ಜರುಗಿದ ಜನತಾದರ್ಶನ ಕಾರ್ಯಕ್ರಮದಲ್ಲಿ ಈ ಬಗ್ಗೆ ನೋವು ತೋಡಿಕೊಂಡಿದ್ದೇವು. ಎಸ್ಪಿಗೆ ಅವರು ತಿಳಿಸಿದ್ದರು. ಮಹಿಳಾ ಹಕ್ಕುಗಳ ಆಯೋಗ, ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಹಲವಡೆ ಮನವಿ ಮಾಡಿದರೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಡೊಳ್ಳಿನ ಕುಟುಂಬಸ್ಥರು ಆರೋಪಿಸಿದರು.