Attempted murder case: Bhadravathi Congress MLA Court relief for Sangamesh

ಪ್ರಕರಣದಲ್ಲಿ ಆರೋಪಮುಕ್ತಗೊಳಿಸಿದ ಜನಪ್ರತಿನಿಧಿ ಕೋರ್ಟ್‌

(ಸಂಗಮೇಶ್‌ ಮಗ್‌ಶಾಟ್‌)

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಲೆ ಯತ್ನ ಪ್ರಕರಣದಲ್ಲಿ ಭದ್ರಾವತಿ ಕಾಂಗ್ರೆಸ್‌ ಶಾಸಕ ಬಿ.ಕೆ. ಸಂಗಮೇಶ್‌ ಮತ್ತು ಇತರರನ್ನು ಆರೋಪ ಮುಕ್ತಗೊಳಿಸಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಮೂಲಕ ಶಾಸಕರಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

ಶಾಸಕ ಬಿ.ಕೆ.ಸಂಗಮೇಶ್‌ ಮತ್ತು ಇತರರ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ। ಕೆ.ಬಿ. ಶಿವಪ್ರಸಾದ್‌ ಅವರು ಮಂಗಳವಾರ ಪ್ರಕಟಿಸಿದ್ದು, ಎಲ್ಲ ಆರೋಪಿಗಳೂ ನಿರಪರಾಧಿಗಳು ಎಂದು ಘೋಷಿಸಿದರು.

ಆರೋಪಿಗಳಾದ ಬಿ.ಕೆ.ಸಂಗಮೇಶ್‌ ಮತ್ತು ಅವರ ಅಣ್ಣ ಬಿ.ಕೆ. ಮೋಹನ್, ತಮ್ಮ ಬಿ.ಕೆ. ಜಗದೀಶ್‌ ಹಾಗೂ ಸಂಗಮೇಶ್‌ ಮಕ್ಕಳಾದ ಗಣೇಶ ಮತ್ತು ಬಸವರಾಜ ಪರ ಹಿರಿಯ ವಕೀಲ ಸಿ.ಎಚ್‌. ಹನುಮಂತರಾಯ ಅವರು ಮಂಡಿಸಿದ ವಾದವನ್ನು ಮಾನ್ಯ ಮಾಡಿರುವ ನ್ಯಾಯಾಧೀಶರು, ದೋಷಪೂರಿತ ತನಿಖೆಗೆ ಜವಾಬ್ದಾರರಾಗಿರುವ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಜರುಗಿಸಲು ಈ ತೀರ್ಪನ್ನು ಖುಲಾಸೆ ಪರಿಶೀಲನಾ ಸಮಿತಿಗೆ (ಅಕ್ವಿಟಲ್‌ ರಿವ್ಯೂ ಕಮಿಟಿ) ಆದೇಶಿಸಿದ್ದಾರೆ.

ರಾಜಕೀಯ ಎದುರಾಳಿ ಎನ್ನಲಾದ ದೂರುದಾರ ಸಿ.ಮಹೇಶ್‌ ಕುಮಾರ್‌ ಉದ್ದೇಶಪೂರ್ವಕವಾಗಿ ಶಾಸಕರ ವಿರುದ್ಧ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಸುಳ್ಳು ಸಾಕ್ಷ್ಯ ನೀಡಲಾಗಿದೆ ಎಂಬ ಆರೋಪಿಗಳ ಪರ ವಕೀಲರ ವಾದವನ್ನು ಎತ್ತಿ ಹಿಡಿದಿರುವ ನ್ಯಾಯಾಧೀಶರು, ದೂರುದಾರರ ಅಕ್ಕ ಜಯಮ್ಮ ಅವರು ನಂಬಲರ್ಹವಾದ ಸಾಕ್ಷ್ಯ ನುಡಿಯಲು ವಿಮುಖರಾದ ಕಾರಣ ಯಾವುದೇ ರೀತಿಯ ಪರಿಹಾರಕ್ಕೆ ಅನರ್ಹರು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಏನಿದು ಪ್ರಕರಣ?

ಭದ್ರಾವತಿ ನಗರದ ಹಳದಮ್ಮ ದೇವಿಯ ಜಾತ್ರೆಯ ಪ್ರಯುಕ್ತ 2010ರ ಮೇ 21ರಂದು ಕುಸ್ತಿ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ಬಿ.ಕೆ.ಸಂಗಮೇಶ್‌ ಹಾಗೂ ಅವರ ಬೆಂಬಲಿಗರು ಕಾರುಗಳಲ್ಲಿ ಬಂದು ನಮ್ಮ ಮನೆಗೆ ನುಗ್ಗಿ ನಮ್ಮ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದರು. ಈ ಸಮಯದಲ್ಲಿ ಬಿಡಿಸಲು ಬಂದ ನನ್ನ ಅಕ್ಕ ಜಯಮ್ಮ ಅವರ ಮೇಲೂ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಿ ಸಿ.ಮಹೇಶ್‌ ಕುಮಾರ್‌ ಅವರು ಬಿ.ಕೆ.ಸಂಗಮೇಶ್‌ ಮತ್ತಿತರರ ವಿರುದ್ಧ ದೂರು ನೀಡಿದ್ದರು. ದೂರಿನ ಅನ್ವಯ ಭದ್ರಾವತಿಯ ಪೇಪರ್‌ ಟೌನ್‌ ಠಾಣೆಯ ಪೊಲೀಸರು ಭಾರತೀಯ ದಂಡ ಸಂಹಿತೆ–1860ರ ಕಲಂ 120 (ಬಿ) (ಅಪರಾಧಿಕ ಪಿತೂರಿ), 147 (ಗಲಭೆ), 307 (ಕೊಲೆ ಯತ್ನ) ಮತ್ತು 326ರ (ಅಪಾಯಕಾರಿ ಆಯುಧ ಬಳಸಿ ಗಂಭೀರ ಗಾಯ ಉಂಟು ಮಾಡುವುದು) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.