ಸಾರಾಂಶ
ರೌಡಿಶೀಟರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯ ಗಣೇಶಪುರದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ರೌಡಿಶೀಟರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯ ಗಣೇಶಪುರದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.ರೌಡಿಶೀಟರ್ ಪ್ರಫುಲ್ ಪಾಟೀಲ ಮೇಲೆಯೇ ಗುಂಡಿನ ದಾಳಿ ನಡೆದಿದೆ. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಬೆಳಗುಂದಿ ಗ್ರಾಮದಿಂದ ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಕಾರಿನ ಗಾಜಿಗೆ ಗುಂಡು ತಗುಲಿದ್ದು, ಅದೃಷ್ಟವಶಾತ್ ಪ್ರಫುಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನ ಗಾಜುಗಳು ಚೂರುಗಳು ಚುಚ್ಚಿದ್ದರಿಂದ ಆತನ ಮುಖ ಮತ್ತು ತಲೆಭಾಗಕ್ಕೆ ಗಾಯವಾಗಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಗ್ರಾಮೀಣ ಠಾಣೆ ಎಸಿಪಿ ಗಂಗಾಧರ್, ಪಿಐ ಮತ್ತು ಅವರ ತಂಡ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯ ಮಾಹಿತಿ ಕಲೆ ಹಾಕಿದೆ.2024 ಜೂನ್ 16ರಂದು ರಾಜು ಕಡೋಲ್ಕರ್ ಎಂಬಾತನ ಮೇಲೆ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ರೌಡಿಶೀಟರ್ ಪ್ರಫುಲ್ ಪಾಟೀಲ ಬಂಧನವಾಗಿತ್ತು. ಪೊಲೀಸರು ಈತನ ಮೇಲೆ ರೌಡಿಶೀಟ್ ತೆರೆದು ಆರು ತಿಂಗಳು ಗಡಿಪಾರು ಕೂಡ ಮಾಡಿದ್ದರು. ಪ್ರಫುಲ್ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಪ್ರಫುಲ್ ಪಾಟೀಲ್ನನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.