. ದೇವಸ್ಥಾನದ ಮುಂದಿನ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳವು ಮಾಡಲು ವಿಫಲ ಯತ್ನ ನಡೆಸಿದ ಘಟನೆ ಅ.16ರ ತಡರಾತ್ರಿ ನಡೆದಿದ್ದು, ತಾಲೂಕಿನಲ್ಲಿ ಹುಂಡಿ ಕಳ್ಳರ ತಂಡವು ಮತ್ತೆ ಆಕ್ಟಿವ್ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬ್ಯಾಡಗಿ: ದೇವಸ್ಥಾನದ ಮುಂದಿನ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳವು ಮಾಡಲು ವಿಫಲ ಯತ್ನ ನಡೆಸಿದ ಘಟನೆ ಅ.16ರ ತಡರಾತ್ರಿ ನಡೆದಿದ್ದು, ತಾಲೂಕಿನಲ್ಲಿ ಹುಂಡಿ ಕಳ್ಳರ ತಂಡವು ಮತ್ತೆ ಆಕ್ಟಿವ್ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಪಟ್ಟಣದ ಕದರಮಂಡಲಗಿ ರಸ್ತೆ ನಿಸರ್ಗ ನಗರದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಹುಂಡಿ ಕಳವು ಮಾಡಲು ವಿಫಲ ಯತ್ನ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ, ಅರ್ಚಕರು ಎಂದಿನಂತೆ ಶನಿವಾರ ಬೆಳಗ್ಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳಿದ ಸಂದರ್ಭದಲ್ಲಿ ಪ್ರವೇಶ ದ್ವಾರಕ್ಕೆ ಹಾಕಲಾಗಿದ್ದ ಬೀಗ ಮುರಿದಿದ್ದು ಕಂಡು ಬಂದಿದೆ, ಒಳಗೆ ತೆರಳಿ ನೋಡಿದರೆ ದೇವಸ್ಥಾನದ ಹುಂಡಿ ಕೆಳಗೆ ಬಿದ್ದಿರುವ ದೃಶ್ಯ ಕಂಡು ಬಂದಿದೆ. ಒಳನುಗ್ಗಿದ ಕಳ್ಳರು 2 ಹುಂಡಿಗಳ ಪೈಕಿ ಒಂದನ್ನು ಸುಮಾರು 25 ಅಡಿ ದೂರದವರೆಗೆ ಎಳೆದೊಯ್ದಿದ್ದು ಆದರೆ ಹುಂಡಿ ಭಾರವಾಗಿದ್ದರಿಂದ ಬಳಿಕ ಅದನ್ನು ಎತ್ತಲಾಗದೇ ಸ್ಥಳದಲ್ಲೇ ಬಿಟ್ಟು ಪರಾರಿಯಾದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಆಕ್ಟಿವ್ ಆದ ಹುಂಡಿ ಕಳ್ಳರ ತಂಡ: ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕೃತ್ಯದ ಹಿಂದೆ ವ್ಯವಸ್ಥಿತ ಕಳ್ಳರ ತಂಡವಿದ್ದು, ಹುಂಡಿ ಕಳ್ಳರ ತಂಡವು ಮತ್ತೆ ತಾಲೂಕಿನಲ್ಲಿ ಆಕ್ಟಿವ್ ಆದ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದು ಈ ಹಿಂದೆ ಬನ್ನಿಹಟ್ಟಿ, ಮೋಟೆಬೆನ್ನೂರ ಇನ್ನಿತರ ಕಡೆಗಳಲ್ಲಿ ಗ್ರಾಮದ ಹೊರ ವಲಯದಲ್ಲಿರುವ ಹುಂಡಿಗಳನ್ನು ಕಳುವು ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.
ಮನೆ, ಬೈಕ್ಗಳ ಕಳವು ಹೆಚ್ಚಿದ ಆತಂಕ: ಬ್ಯಾಡಗಿ ಪಟ್ಟಣದಲ್ಲಿ ಕಳೆದ ಕೆಲ ವಾರಗಳಿಂದ ಮತ್ತೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಮನೆಗಳ ಮುಂದೆ ನಿಲ್ಲಿಸಿರುವ ನೀರಿನ ಗಾಡಿಗಳು ಹಾಗೂ ಬೈಕ್ಗಳನ್ನು ಕಳ್ಳರು ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಸಾಕ್ಷಿಯೆಂಬಂತೆ, ಶುಕ್ರವಾರ ರಾತ್ರಿ ನೆಹರು ನಗರದ ಛತ್ರ ರಸ್ತೆಯ ಎರಡನೇ ಕ್ರಾಸ್ನಲ್ಲಿರುವ ಮನೆಯೊಂದಕ್ಕೆ ಕಳ್ಳರು ನುಗ್ಗಲು ಯತ್ನಿಸಿದ್ದು ಸದರಿ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಗಸ್ತು ಹೆಚ್ಚಿಸಲಾಗುವುದು: ಪಟ್ಟಣದಲ್ಲಿ ನಡೆಯುತ್ತಿರುವ ಕಳ್ಳತನದ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗುವುದು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಪರಿಶೀಲನೆ ನಡೆಸುವ ಮೂಲಕ ಕಳ್ಳತನ ಪ್ರಕರಣ ತನಿಖೆ ಚುರುಕುಗೊಳಿಸಿ ಸಾರ್ವಜನಿಕರಲ್ಲಿ ಭದ್ರತೆ ಕುರಿತು ಭರವಸೆ ಮೂಡಿಸಲಾಗುವುದು ಎಂದು ಪಿಎಸ್ಐ ಭಾರತಿ ಕುರಿಯವರ ಹೇಳಿದರು.