ಕನ್ನಡೇತರ ಫಲಕಕ್ಕೆ ಮಸಿ ಹಚ್ಚುವ ಯತ್ನ<bha>;</bha> ಬಂಧನ
KannadaprabhaNewsNetwork | Published : Nov 03 2023, 12:31 AM IST
ಕನ್ನಡೇತರ ಫಲಕಕ್ಕೆ ಮಸಿ ಹಚ್ಚುವ ಯತ್ನ<bha>;</bha> ಬಂಧನ
ಸಾರಾಂಶ
ನಗರದ ರಿಯಲನ್ಸ್ ಮಳಿಗೆ ಬಳಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಹೋರಾಟ । ಕನ್ನಡಕ್ಕೆ ಆದ್ಯತೆ ನೀಡಿಲ್ಲವೆಂದು ಖಂಡನೆ
ನಗರದ ರಿಯಲನ್ಸ್ ಮಳಿಗೆ ಬಳಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಹೋರಾಟ । ಕನ್ನಡಕ್ಕೆ ಆದ್ಯತೆ ನೀಡಿಲ್ಲವೆಂದು ಖಂಡನೆ ಕನ್ನಡಪ್ರಭ ವಾರ್ತೆ ದಾವಣಗೆರೆ ವಾಣಿಜ್ಯ ಮಳಿಗೆಗಳ ಮುಂದೆ, ಮೇಲ್ಭಾಗದಲ್ಲಿ ಕನ್ನಡೇತರ ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಬರೆಸುವಂತೆ ಫಲಕಗಳಿಗೆ ಮಸಿ ಬಳಿಯಲು ಮುಂದಾಗಿದ್ದ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ.ಅವಿನಾಶ್ ಸೇರಿ ಪದಾಧಿಕಾರಿಗಳು, ಕಾರ್ಯಕರ್ತರ ಪೊಲೀಸರು ಬಂಧಿಸಿದ ಘಟನೆ ನಡೆಯಿತು. ನಗರದ ಹಳೆ ಪಿಬಿ ರಸ್ತೆಯ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರಿಯಲನ್ಸ್ ಮಳಿಗೆ ಬಳಿ ವೇದಿಕೆ ರಾಜ್ಯಾಧ್ಯಕ್ಷ ವಿ.ಅವಿನಾಶ ಇತರರು ಅಂಗಡಿಗಳ ಫಲಕದಲ್ಲಿ ಕನ್ನಡಕ್ಕೆ ಆದ್ಯತೆ ಇಲ್ಲದ್ದು ಖಂಡಿಸಿ, ಫಲಕಗಳಿಗೆ ಮಸಿ ಬಳಿಯುವ ಹೋರಾಟಕ್ಕೆ ಮುಂದಾಗಿದ್ದ ವೇಳೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಂಧಿಸಿ, ಜಿಲ್ಲಾ ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದರು. ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ವಿ.ಅವಿನಾಶ, ರಿಲಯನ್ಸ್ ಡಿಜಿಟಲ್ ಅಂಗಡಿಯವರು ಕನ್ನಡ ಭಾಷೆ ಕಡೆಗಣಿಸಿದ ಬಗ್ಗೆ ಪ್ರಶ್ನಿಸಿದಾಗ ಬೇಜವಾಬ್ದಾರಿ ಉತ್ತರ ನೀಡಿದರು. ಇದರಿಂದ ಕನ್ನಡಕ್ಕೆ ಆದ್ಯತೆ ನೀಡದ ಅಂಗಡಿಗಳ ಕನ್ನಡೇತರ ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾಗಿದ್ದೆವು. ನಾವು ಯಾರಿಗೂ ತೊಂದರೆ ಕೊಡುವುದಾಗಲೀ, ಕಾನೂನು ಉಲ್ಲಂಘನೆ ಮಾಡುವುದಾಗಲೀ ಮಾಡಿಲ್ಲ. ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ನಾಡ ಭಾಷೆ ಕನ್ನಡ ಇರಬೇಕು. ಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಬೇಕು. ನಾವೂ ಸಹ ವೇದಿಕೆಯಿಂದ ಕನ್ನಡ ನಾಮಫಲಕ ಅಳವಡಿಸಲು ಮನವಿ ಮಾಡಿ, ಸೂಚನಾ ಪತ್ರವನ್ನೂ ನೀಡಿದ್ದೆವು. ಆದರೆ, ಪರ ಭಾಷಿಕರ ಕನ್ನಡ ಕಡೆಗಣನೆಯ ಕಾರಣಕ್ಕೆ ಕನ್ನಡೇತರ ಭಾಷಾ ಫಲಕಗಳಿಗೆ ಮಸಿ ಬಳಿಯಲು ಮುಂದಾಗಿದ್ದೆವು ಎಂದು ತಿಳಿಸಿದರು. ಕನ್ನಡ ಹೊರತುಪಡಿಸಿ, ಆಂಗ್ಲ ಸೇರಿದಂತೆ ಯಾವುದೇ ಭಾಷೆಯ ಫಲಕ ಇದ್ದರೂ ಅವುಗಳಿಗೆ ಮಸಿ ಬಳಿಯುವ, ತೆರವುಗೊಳಿಸುವ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿ ಬಳಸುವಂತೆ ಅನುಷ್ಠಾನಗೊಳಿಸಿದ ರಾಜ್ಯ ನಮ್ಮದು. ಆದರೆ, ರಾಜ್ಯದಲ್ಲಿ ಅಂಗಡಿ ಮುಂಗಟ್ಟು, ಖಾಸಗಿ ಸಂಸ್ಥೆಗಳ ಕಚೇರಿಗಳ ಫಲಕಗಳಲ್ಲಿ ಕನ್ನಡೇತರ ಭಾಷೆಗಳು ರಾರಾಜಿಸುತ್ತಿರುವುದು ಸಹಿಸುವುದೂ ಇಲ್ಲ ಎಂದು ಹೇಳಿದರು. ಪರವಾನಗಿ ರದ್ದುಪಡಿಸಿ, ಫಲಕಗಳ ತೆರವುಗೊಳಿಸಿ: ಕನ್ನಡ ಭಾಷೆ ಕಡೆಗಣಿಸಿದ ಅಂಗಡಿ, ಮುಂಗಟ್ಟುಗಳ ಪರವಾನಗಿ ತಕ್ಷಣ ರದ್ದುಪಡಿಸಬೇಕು. ಕನ್ನಡೇತರ ಫಲಕಗಳನ್ನು ತೆರವುಗೊಳಿಸಬೇಕು. ಇಂದು ಸಾಂಕೇತಿಕವಾಗಿ ಮಸಿ ಬಳಿಯುವ ಹೋರಾಟ ಹಮ್ಮಿಕೊಂಡಿದ್ದ ವೇಳೆಯೇ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ. ನಮ್ಮ ಹೋರಾಟವೂ ಇಲ್ಲಿಗೆ ನಿಲ್ಲುವುದಿಲ್ಲ. ಕನ್ನಡ ಭಾಷೆಗೆ ಆದ್ಯತೆ ನೀಡದ ಫಲಕಗಳ ವಿರುದ್ಧ ನಮ್ಮ ಹೋರಾಟ ನಿರಂತರ ಸಾಗಲಿದೆ ಎಂದು ವಿ.ಅವಿನಾಶ ಎಚ್ಚರಿಸಿದರು. ವೇದಿಕೆ ಮುಖಂಡರಾದ ಆನಂದ ಇಟ್ಟಿಗುಡಿ, ಎಸ್.ಗಣೇಶ, ಮಾಲಾ ನಾಗರಾಜ, ಡಿ.ಜೆ.ರಾಘವೇಂದ್ರ, ಬಿ.ರಮೇಶ, ಎನ್.ಎಸ್.ಈರಣ್ಣ, ಎಸ್.ಕೆ.ಹನುಮಂತಪ್ಪ, ಡಿ.ಎಸ್.ರಾಜೇಶ, ನಟರಾಜ, ಬಿ.ನಾಗರಾಜ ಇತರರಿದ್ದರು. ಕನ್ನಡಿಗರ ಹಿತಾಸಕ್ತಿಗಾಗಿ ಕಾನೂನಿನ್ವಯ ಕನ್ನಡ ಭಾಷೆ ಬಳಸಬೇಕು. ಫಲಕಗಳಲ್ಲಿ ಶೇ.60 ಕನ್ನಡ ಮತ್ತು ಶೇ.40 ಕನ್ನಡೇತರ ಭಾಷೆ ಇರಲಿ. ಆದರೆ, ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡೇತರ ನಾಮಫಲಕಗಳು ರಾರಾಜಿಸುತ್ತಿದ್ದು, ಪಾಲಿಕೆ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ, ತಾಲೂಕು ಆಡಳಿತಗಳು ಕಣ್ಣು ಮುಚ್ಚಿ ಕುಳಿತಿವೆ. ವಿ.ಅವಿನಾಶ್, ಸಮಗ್ರ ಕರವೇ ಸಂಸ್ಥಾಪಕ ರಾಜ್ಯಾಧ್ಯಕ್ಷ