ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಭಗೀರಥ ಪುತ್ಥಳಿ ಉದ್ಘಾಟನೆ ಸಮಾರಂಭವನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕು ಕೇಂದ್ರವಾದ ಗುಂಡ್ಲುಪೇಟೆಯಲ್ಲಿ ಉಪ್ಪಾರ ಸಮುದಾಯ ಭವನಕ್ಕೆ ನಿವೇಶನ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸಲಹೆ ನೀಡಿದರು.ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಭಗೀರಥ ಮಹರ್ಷಿ ಪುತ್ಥಳಿ ಹಾಗೂ ದೇವಸ್ಥಾನದ ಕಳಸ ಸ್ಥಾಪನೆ ಉದ್ಘಾಟಿಸಿ ಮಾತನಾಡಿ, ಭವನ ನಿರ್ಮಾಣಕ್ಕೆ ನಿವೇಶನ ಮೊದಲು ಬೇಕಿದ್ದು, ನಿವೇಶನಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಉಪ್ಪಾರ ಸಮಾಜ ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕಿದೆ. ಮೌಢ್ಯ, ಕಂದಾಚಾರಕ್ಕೆ ಒಳಗಾಗಬೇಡಿ. ಜೊತೆಗೆ ಬಾಲ್ಯ ವಿವಾಹಕ್ಕೆ ಮುಂದಾಗಬೇಡಿ. ಮಕ್ಕಳ ಭವಿಷ್ಯ ದೃಷ್ಟಿಯಿಂದ ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಬೇಕು ಎಂದು ಕಿವಿಮಾತು ಹೇಳಿದರು.
ಎಲ್ಲರ ಜೀವನದಲ್ಲಿ ಏಳು-ಬೀಳುಗಳು ಬಂದರೂ ಅದನ್ನೆಲ್ಲ ಮೆಟ್ಟಿನಿಂತು ಯಶಸ್ವಿಯಾಗಿ ಮುನ್ನಡೆದರೆ ಭಗೀರಥ ಪ್ರಯತ್ನ ಎನ್ನುತ್ತಾರೆ. ಉಪ್ಪಾರ ಸಮಾಜ ಕೂಡ ಇತರೆ ಸಮಾಜದಂತೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಪ್ರಯತ್ನಿಸಿ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿದರು. ಉಪ್ಪಾರ ಸಮಾಜದ ಪುರುಷೋತ್ತಮನಂದ ಶ್ರೀಗಳು ಮಾತನಾಡಿ, ಸಮುದಾಯದ ಮುಖಂಡರು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಸಹಕಾರ ಪಡೆದು ಸಮುದಾಯದ ಅಭಿವೃದ್ಧಿಗೆ ಮುಂದಾಗಿ ಎಂದರು.ಸರಗೂರು ಶ್ರೀಗಳು, ರಾಜ್ಯ ಉಪ್ಪಾರ ಸಂಘದ ಉಪಾಧ್ಯಕ್ಷ ಎಂ.ರಾಮಚಂದ್ರ, ಚಾಮುಲ್ ಮಾಜಿ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತಾಪಂ ಮಾಜಿ ಸದಸ್ಯ ಮೂಗಶೆಟ್ಟಿ ಹಾಗೂ ಗ್ರಾಮದ ವಿವಿಧ ಸಮಾಜದ ಮುಖಂಡರು ಹಾಗೂ ಉಪ್ಪಾರ ಸಮಾಜದ ಮುಖಂಡರು, ಯಜಮಾನರು, ಯುವಕರು ಇದ್ದರು.