ರೈತರ ಕೆಲಸಗಳನ್ನು ವಿಳಂಬ ಮಾಡುತ್ತಿರುವ ದೂರು ಕೇಳಿಬಂದ ಕಾರಣ ನಾನೇ ಬಂದಿದ್ದೇನೆ. ಪೌತಿಖಾತೆಗಳನ್ನು ಆದ್ಯತೆ ಮೇಲೆ ಮಾಡಿಕೊಡಬೇಕು. ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗಿ ರೈತರ ಕಷ್ಟಸುಖ ಆಲಿಸಿ ಪರಿಹರಿಸಬೇಕು. ಜಾತಿ, ಆದಾಯ ಪ್ರಮಾಣಪತ್ರ ಶೀಘ್ರ ಮಾಡಿಕೊಡಿ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ರೈತರ ಕೆಲಸವನ್ನು ತಕ್ಷಣವೇ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಕಚೇರಿಗೆ ಅಲೆದಾಡಿಸುವ ಕಾರ್ಯ ಮಾಡಬೇಡಿ ಎಂದು ಮಾಜಿ ಸಚಿವ ಸಿಎಸ್.ಪುಟ್ಟರಾಜು ನಾಡಕಚೇರಿ ಉಪ ತಹಸೀಲ್ದಾರ್ ಮತ್ತು ಸಿಬ್ಬಂದಿ ವರ್ಗಕ್ಕೆ ತಾಕೀತು ಮಾಡಿದರು.ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿ ಮಾತನಾಡಿ, ರೈತರ ಕೆಲಸಗಳನ್ನು ವಿಳಂಬ ಮಾಡುತ್ತಿರುವ ದೂರು ಕೇಳಿಬಂದ ಕಾರಣ ನಾನೇ ಬಂದಿದ್ದೇನೆ. ಪೌತಿಖಾತೆಗಳನ್ನು ಆದ್ಯತೆ ಮೇಲೆ ಮಾಡಿಕೊಡಬೇಕು. ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗಿ ರೈತರ ಕಷ್ಟಸುಖ ಆಲಿಸಿ ಪರಿಹರಿಸಬೇಕು. ಜಾತಿ, ಆದಾಯ ಪ್ರಮಾಣಪತ್ರ ಶೀಘ್ರ ಮಾಡಿಕೊಡಿ ಎಂದರು.
ಇದೇ ವೇಳೆ ಕುಡಿಯುವ ನೀರಿನ ಸಮಸ್ಯೆಯ ಕುರಿತಂತೆ ನಾಗರೀಕರ ಮನವಿ ಆಲಿಸಿ ನಿರಂತರವಾಗಿ ಕುಡಿಯುವ ನೀರು ಪೂರೈಸಲು ಕ್ರಮವಹಿಸಬೇಕು ಎಂದು ಗ್ರಾಪಂ ಅಧ್ಯಕ್ಷರಿಗೆ ಸೂಚನೆ ನೀಡಿ ನೀರಿನ ಟ್ಯಾಂಕ್ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ವಹಿಸಬೇಕು ಎಂದರು.ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ಕಸ ತ್ಯಾಜ್ಯ ವೀಕ್ಷಿಸಿ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವರು, ಗ್ರಾಪಂ ಮತ್ತು ದೇವಾಲಯದ ಸೇರಿ ಪಾಸ್ಟಿಕ್ ಮುಕ್ತ ಪ್ರವಾಸಿ ತಾಣ ಎಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ ಪ್ರಮುಖ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆಯಾಗದಂತೆ ಎಚ್ಚರವಹಿಸಬೇಕು. ಮೇಲುಕೋಟೆ ಸ್ವಚ್ಛ ಪ್ರವಾಸಿತಾಣವಾಗಿಡಲು ಕ್ರಮವಹಿಸಬೇಕು ಎಂದರು.
ರೈತರು ನಾಗರೀಕರು ಯಾವುದೇ ಸಂದರ್ಭದಲ್ಲಾದರೂ ಸಮಸ್ಯೆಗಳ ಬಗ್ಗೆ ನನ್ನನ್ನು ಸಂಪರ್ಕಿಸಬಹುದು. ಅಧಿಕಾರ ಇರಲಿ ಇಲ್ಲದಿರಲಿ ಜನಸೇವೆ ಮಾಡುತ್ತೇನೆ. ಅಂತಹ ಕೋವಿಡ್ ವೇಳೆಯಲ್ಲೂ ಜನರೊಂದಿಗೆ ಇದ್ದು ಸೇವೆ ಮಾಡಿದ್ದೇನೆ. ಅಧಿಕಾರ ಇಲ್ಲ ಎಂದು ಕೂರುವ ವ್ಯಕ್ತಿನಾನಲ್ಲ. ಜನರ ಮಧ್ಯ ಇದ್ದು ಕೆಲಸಮಾಡುವ ಸೇವಕ ಎಂದುಕೊಂಡಿದ್ದೇನೆ. ಮೇಲುಕೋಟೆ ಕ್ಷೇತ್ರದಾದ್ಯಂತ ಸುತ್ತಾಡಿ ಜನರ ಸಮಸ್ಯೆ ಬಗೆಹರಿಸುತ್ತೇನೆ. ಅಧಿಕಾರಿಗಳು ಹಿಂದೆ ಬಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದರು.ಈ ವೇಳೆ ನಾಡಕಚೇರಿ ಎಲ್ಲಾ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷ ಭವಾನಿ ಹರಿಧರ, ಮಾಜಿ ಉಪಾಧ್ಯಕ್ಷ ಜಿ.ಕೆ ಕುಮಾರ್, ಈಶಮುರುಳಿ, ಪುಳಿಯೋಗರೆ ರವಿ ಸೇರಿದಂತೆ ಹಲವಾರು ರೈತರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.