ಶಾಲಾ ಮಕ್ಕಳ ಕಲಾ ಪ್ರತಿಭೆ, ಸಿದ್ಧತೆ ನಟನೆಗೆ ಪ್ರೇಕ್ಷಕರ ಮೆಚ್ಚುಗೆ

| Published : Aug 03 2025, 01:30 AM IST

ಶಾಲಾ ಮಕ್ಕಳ ಕಲಾ ಪ್ರತಿಭೆ, ಸಿದ್ಧತೆ ನಟನೆಗೆ ಪ್ರೇಕ್ಷಕರ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಂದ ವೈವಿಧ್ಯಮಯ ನಾಟಕಗಳು ಪ್ರದರ್ಶನಗೊಂಡು ಮಕ್ಕಳಲ್ಲಿನ ಕಲಾತ್ಮತೆ ಅನಾವರಣಗೊಂಡಿತ್ತು. ಶಾಲೆಯ ಮಕ್ಕಳು ಮೂಡಲಪಾಯ ಶೈಲಿಯ ಯಕ್ಷಗಾನ ಮತ್ತು ಕರ್ಣಾರ್ಜುನ ಕಾಳಗ ನಾಟಕ ಅತ್ಯಂತ ಮೆಚ್ಚುಗೆ ಗಳಿಸಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಪಿಇಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕಲರವ ಚಿಣ್ಣರ ಮೇಳದ ಸಮಾರೋಪ ಸಮಾರಂಭದಲ್ಲಿ ಶಾಲಾ ಮಕ್ಕಳ ಕಲಾ ಪ್ರತಿಭೆ, ಸಿದ್ಧತೆ, ನಟನೆ, ಸಮಯೋಜಿತ ಸಂಭಾಷಣೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಂದ ವೈವಿಧ್ಯಮಯ ನಾಟಕಗಳು ಪ್ರದರ್ಶನಗೊಂಡು ಮಕ್ಕಳಲ್ಲಿನ ಕಲಾತ್ಮತೆ ಅನಾವರಣಗೊಂಡಿತ್ತು. ಶಾಲೆಯ ಮಕ್ಕಳು ಮೂಡಲಪಾಯ ಶೈಲಿಯ ಯಕ್ಷಗಾನ ಮತ್ತು ಕರ್ಣಾರ್ಜುನ ಕಾಳಗ ನಾಟಕ ಅತ್ಯಂತ ಮೆಚ್ಚುಗೆ ಗಳಿಸಿತು. ಪಿಇಎಸ್ ಕಾಲೇಜಿ ವಿದ್ಯಾರ್ಥಿಗಳು ಬಿ.ವಿ.ಕಾರಂತ್ ಅವರ ಕಥಾವಸ್ತು ಆಧಾರಿತ ಪಂಜರದ ಶಾಲೆ ಎಂಬ ನಾಟಕ ಪ್ರದರ್ಶಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮಕ್ಕಳು ಅಭಿನಯಿಸಿದ ನಾಟಕ, ಕಂಸಾಳೆ ನೃತ್ಯ ಪ್ರದರ್ಶನ ಅದ್ಭುತವಾಗಿತ್ತು. ಮಕ್ಕಳ ಪಾಲಕರು, ನಾಟಕ ಕಲಿಯಲು ಪ್ರೋತ್ಸಾಹ ನೀಡಿದ ಶಿಕ್ಷಕ ನಂಜುಂಡಸ್ವಾಮಿ ಹಾಗೂ ಅಭಿಯಿಸಿದ ಮಕ್ಕಳಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪಟ್ಟಣದಲ್ಲಿ ರಂಗಮಂದಿರ ನಿರ್ಮಾಣಕ್ಕಾಗಿ ನಾನು ಅಗತ್ಯ ಸಹಕಾರ ನೀಡುತ್ತೇನೆ. ಶಾಸಕರು ಈ ಬಗ್ಗೆ ಧ್ವನಿಗೂಡಿಸಬೇಕು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಅನುದಾನ ಕೊಡಿಸುವ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ ಮಾತನಾಡಿ, ನಶಿಸುತ್ತಿರುವ ಜನಪದ ಕಲೆಯನ್ನು ಪುನರ್ಜೀವಗೊಳಿಸಬೇಕಿದೆ. ಶಾಲಾ ಮಕ್ಕಳು ಶಿಕ್ಷಕ ನಂಜುಂಡಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೃಷ್ಣಾರ್ಜುನ ಕಾಳಗ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ಈ ನಾಟಕ 21 ಪ್ರದರ್ಶನ ಕಂಡಿದೆ ಎಂದರು.

ಪಾಂಡವಪುರ ತಹಸೀಲ್ದಾರ್ ಎಸ್.ಸಂತೋಷ್ ಕೂಡ ಮೂಲತಃ ರಂಗಭೂಮಿ ಕಲಾವಿದರಾಗಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೆಲಸದ ಎಷ್ಟೇ ಒತ್ತಡವಿದ್ದರೂ ತಮ್ಮನ್ನು ತಾವು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರಂಗ ಕಲೆ ಮತ್ತು ಸಾಂಸ್ಕೃತಿಕ ಕಲೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ನಂದೀಶ್, ರಂಗಭೂಮಿ ನಿರ್ದೇಶಕ ಪ್ರಮೋದ್ ಶಿಗ್ಗಾಂವ್, ಶಿಕ್ಷಕ ರಮೇಶ್ ಬೀರಶೆಟ್ಟಹಳ್ಳಿ ಹಿರೇಮರಳಿ ಯೋಗೇಶ್ ಇತರರು ಇದ್ದರು.