ನೀನಾಸಂ ನಾಟಕೋತ್ಸವಕ್ಕೆ ನುಗ್ಗಿ ಬಂದ ಪ್ರೇಕ್ಷಕರು

| Published : Dec 14 2024, 12:45 AM IST / Updated: Dec 14 2024, 12:46 AM IST

ನೀನಾಸಂ ನಾಟಕೋತ್ಸವಕ್ಕೆ ನುಗ್ಗಿ ಬಂದ ಪ್ರೇಕ್ಷಕರು
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಿನಗಳ "ನೀನಾಸಂ ನಾಟಕೋತ್ಸವ " ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

ಬಳ್ಳಾರಿ: ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ರಂಗತೋರಣ ಮಂಟಪದಲ್ಲಿ ಜರುಗಿದ ಎರಡು ದಿನಗಳ "ನೀನಾಸಂ ನಾಟಕೋತ್ಸವ " ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

ಶೈಲೀಕೃತ ನಾಟಕಗಳಿಗೆ ಪ್ರೇಕ್ಷಕರ ಬರ ಎಂಬ ಮಾತುಗಳಿಗೆ ನೀನಾಸಂನ ನುರಿತ ಕಲಾವಿದರ ತಂಡ ಹುಸಿಗೊಳಿಸಿತಲ್ಲದೆ, ಪೌರಾಣಿಕ, ಚಾರಿತ್ರಿಕ ಹಾಗೂ ಸಾಮಾಜಿಕ ನಾಟಕಗಳಂತೆಯೇ ಶೈಲೀಕೃತ ನಾಟಕಗಳು ಗುಣಮಟ್ಟವಿದ್ದರೆ ಖಂಡಿತ ಪ್ರೇಕ್ಷಕರು ಥಿಯೇಟರ್‌ಗೆ ನುಗ್ಗುತ್ತಾರೆ ಎಂಬಮಾತನ್ನು ಎರಡು ದಿನಗಳ ನಾಟಕೋತ್ಸವ ಸಾಕ್ಷೀಕರಿಸಿತು.ವಾಜಪೇಯಿ ಬಡಾವಣೆಯಲ್ಲಿ ಇನ್ನು ನಿರ್ಮಾಣ ಹಂತದಲ್ಲಿರುವ ನೂತನ ರಂಗತೋರಣ ಮಂಟಪದಲ್ಲಿ ಜರುಗಿದ ನಾಟಗಳನ್ನು ವೀಕ್ಷಿಸಲು ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದ ಜನರು ಆಗಮಿಸಿದ್ದರು. ಹೀಗಾಗಿ ಎರಡು ದಿನ ರಂಗತೋರಣ ಮಂಟಪ ಹೌಸ್‌ಫುಲ್ ಆಗಿತ್ತು.

ಮೊದಲ ದಿನ ಪ್ರದರ್ಶನಗೊಂಡ ನಾಡಿನ ಖ್ಯಾತ ಲೇಖಕ ಹಾಗೂ ಚಿಂತಕ ಕೆ.ವಿ.ಅಕ್ಷರ ಅವರ ನಿರ್ದೇಶನದ "ಮಾಲತೀ ಮಾಧವ " ನಾಟಕ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕಿರುವ ಹಲವು ತೊಡಕುಗನ್ನು ದಾಟಿ ಕಡೆಗೂ ಮದುವೆಯಾಗುತ್ತಾರೆ. ಮಾಲತೀಮಾಧವರ ವಿವಾಹಕ್ಕೆ ವಿಘ್ನ ಸೃಷ್ಟಿಸಲಿಕ್ಕೆ ನಾಟಕವು ರಾಜಕಾರಣದ ಒಂದು ಎಳೆಯನ್ನು ತರುತ್ತದೆ. ಈ ನಾಟಕವು ಕಾಮಂದಕಿಯೆಂಬ ಬೌದ್ಧ ಸನ್ಯಾಸಿಯನ್ನೂ ಹಾಗೂ ಅವಳ ಶಿಷ್ಯಂದಿರನ್ನು ಬಳಸಿಕೊಳ್ಳುತ್ತದೆ. ಸಂಸಾರವನ್ನು ತೊರೆದು ವೈರಾಗ್ಯದತ್ತ ಮುಖ ಮಾಡಿರುವ ಬೌದ್ಧ ಸನ್ಯಾಸಿಗಳೇ ಇಲ್ಲಿ ಸಂಬಂಧಗಳನ್ನು ಕಟ್ಟುವ ಸೂತ್ರಧಾರರಾಗುತ್ತಾರೆ.

ಕವಿ ಹಾಗೂ ಲೇಖಕ ಜಯಂತ್ ಕಾಯ್ಕಿಣಿ ಅವರು ಕನ್ನಡಕ್ಕೆ ಅನುವಾದಿಸಿದ "ಅಂಕದ ಪರದೆ " ನಾಟಕ ಎರಡನೇ ದಿನವೂ ಯಶಸ್ವಿ ಪ್ರದರ್ಶನ ಕಂಡಿತು.

ಮಕ್ಕಳ ಭವಿಷ್ಯಕ್ಕಾಗಿ ದುಡಿದ ಎಲ್ಲವನ್ನೂ ಎತ್ತಿಡುವ ಹೆತ್ತವರು, ಎಲ್ಲವನ್ನೂ ಖಾಲಿ ಮಾಡಿಕೊಳ್ಳುತ್ತಾರೆ. ವೃದ್ಧಾಪ್ಯ ಸಮೀಪಿಸಿದಾಗ ಆಧಾರವಾಗಬೇಕಾದ ಮಕ್ಕಳು ವೃದ್ಧಾಶ್ರಮಕ್ಕೆ ಅಟ್ಟುತ್ತಾರೆ. ಅಲ್ಲಿ ಒಂದೊಂದು ಕುಟುಂಬದ ಕಥೆಗಳು ಅನವರಣಗೊಳ್ಳುತ್ತಾ ಸಾಗುತ್ತವೆ. ಜೀವನದ ಸಂಧ್ಯಾಕಾಲದಲ್ಲಿ ಎದುರಿಸುವ ನೋವು, ನಲಿವುಗಳ ಊಲಕ ಸಮಾಜದ ಇನ್ನೊಂದು ಮುಖವನ್ನು, "ಅಂಕದ ಪರದೆ " ನಾಟಕ ಅನಾವರಣಗೊಳಿಸಿತು.

ನಾಟಕ ಶುರುವಿನಿಂದ ಕೊನೆಗೊಳ್ಳುವವರೆಗೆ ನೀನಾಸಂನ ಕಲಾವಿದರು ಮನೋಜ್ಞ ಅಭಿನಯದಿಂದ ಪ್ರೇಕ್ಷಕರು ಅತ್ತಿತ್ತ ಕದಲದಂತೆ ಹಿಡಿದಿಟ್ಟುಕೊಂಡಿದ್ದರು. ನಾಟಕದಲ್ಲಿನ ವಸ್ತ್ರ ವಿನ್ಯಾಸ, ತಿಳಿ ಹಾಸ್ಯ, ಬೆಳಕಿನ ಪ್ರಯೋಗ, ಪಾತ್ರಗಳ ನಡುವಿನ ಪರಸ್ಪರ ಸಂಭಾಷಣೆ ಹಾಗೂ ತಂಡದ ಕಲಾವಿದರ ಸಮಯೋಚಿತ ಪಾತ್ರ ಪ್ರವೇಶ ಹೆಚ್ಚು ಗಮನ ಸೆಳೆಯಿತು.

ಎರಡನೇ ದಿನದ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸಿರುಗುಪ್ಪದ ಉದ್ಯಮಿ ಸದಾಶಿವ ಕೌತಾಳ ಅವರು ಚಾಲನೆ ನೀಡಿದರು. ಜೆಸ್ಕಾಂ ಅಧಿಕಾರಿ ನವೀನ್ ಕುಮಾರ್, ವಾಜಪೇಯಿ ಬಡಾವಣೆಯ ಮುಖಂಡ ಮಲ್ಲನಗೌಡ, ಡಾ.ವಸ್ತ್ರದ, ಅಡವಿಸ್ವಾಮಿ ಉಪಸ್ಥಿತರಿದ್ದರು. ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಅವರು ನಿರ್ವಹಿಸಿದರು.

ಬಳ್ಳಾರಿಯ ವಾಜಪೇಯಿ ಬಡಾವಣೆಯ ರಂಗತೋರಣ ಮಂಟಪದಲ್ಲಿ ನೀನಾಸಂ ತಂಡದಿಂದ ಪ್ರದರ್ಶನಗೊಂಡ ಅಂಕದಪರದೆ ನಾಟಕದ ಒಂದು ದೃಶ್ಯ.