100 ಅನಧಿಕೃತ ಕಟ್ಟಡಗಳ ತೆರವಿಗೆ ಪ.ಪಂ. ತಿರ್ಮಾನ

| Published : Nov 23 2024, 12:33 AM IST

ಸಾರಾಂಶ

ಪರವಾನಗಿ ಇಲ್ಲದೆ, ಎನ್‌ಎ ಇಲ್ಲದ ಜಮೀನಿನಲ್ಲಿ ನಿರ್ಮಿಸಲಾದ ನೂರು ಕಟ್ಟಡಗಳನ್ನು ಈಗಾಗಲೇ ಗುರುತಿಸಲಾಗಿದ್ದು ಈ ಎಲ್ಲಾ ಕಟ್ಟಡಗಳನ್ನು ನೆಲಸಮ ಮಾಡುವಂತೆ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ವಾನುಮತ ದಿಂದ ನಿರ್ಣಯ ಕೈಗೊಂಡರು.

ಕನ್ನಡಪ್ರಭ ವಾರ್ತೆ ಔರಾದ್

ಪಟ್ಟಣದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ 100 ಕಟ್ಟಡಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಶಾಸಕ ಪ್ರಭು ಚವ್ಹಾಣ್‌ ಅವರ ನೇತೃತ್ವದಲ್ಲಿ ಪ.ಪಂ ಅಧ್ಯಕ್ಷೆ ಸರೂಬಾಯಿ ಘೂಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರವಾನಗಿ ಇಲ್ಲದೆ, ಎನ್‌ಎ ಇಲ್ಲದ ಜಮೀನಿನಲ್ಲಿ ನಿರ್ಮಿಸಲಾದ ನೂರು ಕಟ್ಟಡಗಳನ್ನು ಈಗಾಗಲೇ ಗುರುತಿಸಲಾಗಿದ್ದು ಈ ಎಲ್ಲಾ ಕಟ್ಟಡಗಳನ್ನು ನೆಲಸಮ ಮಾಡುವಂತೆ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡರು.

ಅಲ್ಲದೆ ಅಮರೇಶ್ವರ ದೇವಸ್ಥಾನ ಪಕ್ಕದಲ್ಲಿ 16 ಗುಂಟೆ ಜಮೀನು ಅತಿಕ್ರಮಣವಾಗಿದೆ. ಇದರ ಮೇಲೆ ಅಕ್ರಮವಾಗಿ ಕೆಲ ತಗಡು ಶೆಡ್‌ಗಳನ್ನು ನಿರ್ಮಿಸಿಕೊಳ್ಳಲಾಗಿದೆ ಈ ಜಮೀನು ತೆರವುಗೊಳಿಸಬೇಕಾಗಿದೆ ಎಂದು ಪ.ಪಂ ಸಿಇಒ ಸ್ವಾಮಿದಾಸ ಹೇಳಿದರು.

ಪಟ್ಟಣವನ್ನು ಅಭಿವೃದ್ಧಿಗೊಳಿಸಲು ವರ್ತುಲ ರಸ್ತೆ ನಿರ್ಮಾಣ ಮಾಡಲು ಸರ್ವೆ ಮಾಡಬೇಕು. ಅದಕ್ಕೆ ಬೇಕಾಗಿರುವ ಅನುದಾನವನ್ನು ಕೆಕೆಆರ್‌ಡಿಬಿ ಯೋಜನೆ ಅಡಿ ಒದಗಿಸಿಕೊಡಲು ಶಾಸಕ ಪ್ರಭು ಚವ್ಹಾಣ್‌ ಹೇಳಿದರು.

ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಗೆ 2.3 ಕೋಟಿ ರು. ವೇಚ್ಚದ ಅನುದಾನ ಇದ್ದು ಗುತ್ತಿಗೆದಾರ ಯಂತ್ರ ತಂದು ನಿಲ್ಲಿಸಿ ನಾಪತ್ತೆಯಾಗಿದ್ದಾನೆ. ಈ ಯೋಜನೆ ಮೂಲೆ ಗುಂಪಾಗಿದೆ ಎಂದು ಪಪಂ ಸದಸ್ಯ ದಯಾನಂದ ಘೂಳೆ ಆಕ್ಷೇಪ ವ್ಯಕ್ತಪಡಿಸಿದರು.

ಔರಾದ್‌ನಲ್ಲಿ 20 ಹೊಸ ಅಂಗನವಾಡಿ ನಿರ್ಮಾಣಕ್ಕೆ ಅನುದಾನ ಬಂದಿದೆ ಎಂದು ಶಿಶು ಯೋಜನಾಧಿಕಾರಿ ಹೇಳಿದರು. ಇದಕ್ಕೆ ಪೂರಕವಾದ ಸ್ಥಳದ ಅವಕಾಶ ಮಾಡಿಕೊಡುವಂತೆ ಕೇಳಿದರು.

ಪಟ್ಟಣದಲ್ಲಿ ಹೊಸ ಪಾರ್ಕ್ ನಿರ್ಮಾಣಕ್ಕೆ ಅನುದಾನ ಬಂದಿದೆ ಆದರೆ ಸ್ಥಳದ ಕೊರತೆಯಿದೆ ಕೂಡಲೇ ಸ್ಥಳವನ್ನು ಗುರುತಿಸಿ ಸಾರ್ವಜನಿಕರಿಗೆ ವಾಯು ವಿಹಾರ ಮಾಡಲಿಕ್ಕೆ ಉದ್ಯಾನವನ ನಿರ್ಮಾಣ ಮಾಡುವಂತೆ ಶಾಸಕ ಚವ್ಹಾಣ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಪಟ್ಟಣದಲ್ಲಿನ ಚರಂಡಿ ನಿರ್ವಹಣೆ, ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರು ಸರಬರಾಜು ಸೇರಿದಂತೆ ಅನೇಕ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ರಾಧಾಬಾಯಿ ನರೋಟೆ, ಸದಸ್ಯರಾದ ಧೋಂಡಿಬಾ ನರೋಟೆ, ಸಂತೋಷ ಪೋಕಲವಾರ, ಗುಂಡಪ್ಪ ಮುದಾಳೆ, ಪ್ರಶಾಂತ ಫೂಲಾರಿ, ಬನ್ಸಿಲಾಲ್‌ ಪವಾರ, ಸಂಜು ವಡಿಯಾರ್‌, ನೀಲಮ್ಮ ಖಾನಾಪೂರೆ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.