ಔರಂಗಜೇಬ್‌ ಬ್ಯಾನರ್‌ ತೆರವುಗೊಳಿಸಿದ ಪೊಲೀಸರು

| Published : Nov 05 2024, 01:31 AM IST

ಸಾರಾಂಶ

ಬೆಳಗಾವಿ ನಗರದ ಶಾಹು ನಗರದಲ್ಲಿ ಕೆಲ ಕಿಡಿಗೇಡಿಗಳು ಭಾನುವಾರ ರಾತ್ರಿ ಅಳವಡಿಸಿದ್ದ ಔರಂಗಜೇಬ್‌ ಬ್ಯಾನರ್‌ ಅನ್ನು ಪೊಲೀಸರು ಸೋಮವಾರ ತೆರವುಗೊಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಶಾಹು ನಗರದಲ್ಲಿ ಕೆಲ ಕಿಡಿಗೇಡಿಗಳು ಭಾನುವಾರ ರಾತ್ರಿ ಅಳವಡಿಸಿದ್ದ ಔರಂಗಜೇಬ್‌ ಬ್ಯಾನರ್‌ ಅನ್ನು ಪೊಲೀಸರು ಸೋಮವಾರ ತೆರವುಗೊಳಿಸಿದರು. ರಾತ್ರಿ ವೇಳೆ ಕಿಡಿಗೇಡಿಗಳು ಅನುಮತಿ ಪಡೆಯದೆ ಔರಂಗಜೇಬ್‌ ಭಾವಚಿತ್ರದ ಬ್ಯಾನರ್‌ ಅಳವಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಬ್ಯಾನರ್‌ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿವಾದಾತ್ಮಕ ಬ್ಯಾನರ್‌ ಅನ್ನು ತೆರವುಗೊಳಿಸಿದರು.

ಬ್ಯಾನರ್‌ ತೆರವುಗೊಳಿಸುತ್ತಿದ್ದಂತೆ ಅನ್ಯಕೋಮಿಗೆ ಸೇರಿದ ಯುವಕರು ವಿವಾದಾತ್ಮಕ ಹೇಳಿಕೆಯ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಹಿಂದು ರಾಷ್ಟ್ರ ಎಂದು ಸಾವರ್ಕರ್‌ ಬ್ಯಾನರ್‌ ಹಾಕಿರುವುದನ್ನು ಪೊಲೀಸರು ಏಕೆ ತೆರವುಗೊಳಿಸಿಲ್ಲ? ನಮ್ಮ ಬ್ಯಾನರ್‌ ತೆರವುಗೊಳಿಸಿರುವುದನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಹರಿಬಿಟ್ಟ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.