ದಕ್ಷಿಣ ಕನ್ನಡದ ಪುತ್ತೂರಿನವರಾಗಿದ್ದು ಅನೇಕ ವರ್ಷಗಳಿಂದ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಯೋಗ ಶಿಕ್ಷಕರಾಗಿ ಪ್ರಸಿದ್ಧರಾಗಿರುವ ರಾಜೇಂದ್ರ ಎಂಕಮೂಲೆ ಅವರಿಗೆ ಪ್ರಧಾನಮಂತ್ರಿ ಪುರಸ್ಕಾರ ಲಭಿಸಿದೆ.
ಉಡುಪಿ: ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರಾಗಿದ್ದು ಅನೇಕ ವರ್ಷಗಳಿಂದ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಯೋಗ ಶಿಕ್ಷಕರಾಗಿ ಪ್ರಸಿದ್ಧರಾಗಿರುವ ರಾಜೇಂದ್ರ ಎಂಕಮೂಲೆ ಅವರಿಗೆ ಪ್ರಧಾನಮಂತ್ರಿ ಪುರಸ್ಕಾರ ಲಭಿಸಿದೆ. ಆಸ್ಟ್ರೇಲಿಯಾ ಮತ್ತು ಭಾರತದೊಂದಿಗಿನ ಬಾಂಧವ್ಯ ವೃದ್ಧಿಗೆ ನೀಡಿದ ಕೊಡುಗೆ ಮತ್ತು ಜಾಗತಿಕ ಮಟ್ಟದಲ್ಲಿ ಯೋಗ ಪ್ರಸಾರಕ್ಕೆ ನೀಡಿದ ಕೊಡುಗೆಗಾಗಿ 2022ನೇ ಸಾಲಿನ ಈ ಪುರಸ್ಕಾರ ಪ್ರಾಪ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ನವದೆಹಲಿಯ ಭಾರತ್ ಮಂಟಪದಲ್ಲಿ 19ರಂದು ನಡೆಯುವ ಎರಡನೇ ಬೃಹತ್ ಜಾಗತಿಕ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಲಿರುವರು.ಈ ಹಿಂದೆ 2021 ರಲ್ಲೂ ರಾಜೇಂದ್ರ ಅವರಿಗೆ ಯೋಗ ಶಿಕ್ಷಣಕ್ಕಾಗಿನ ಸೇವೆಗಾಗಿ ರಾಷ್ಟ್ರೀಯ ಪುರಸ್ಕಾರ ಲಭಿಸಿತ್ತು . ಇದೀಗ ಯೋಗ ಪ್ರಸಾರಕ್ಕಾಗಿ ಜಾಗತಿಕ ಮಟ್ಟದ ಪ್ರಶಸ್ತಿ ಒಲಿದು ಬಂದಿದೆ.
ವಾಸುದೇವ ಕ್ರಿಯಾ ಯೋಗ ಎನ್ನುವ ಶೀರ್ಷಿಕೆಯಲ್ಲಿ ಕಳೆದ ಮೂರು ದಶಕಗಳಿಂದ ಎಂಕಮೂಲೆ ಮೆಲ್ಬೋರ್ನ್ ನಲ್ಲಿ ಸಾವಿರಾರು ಜನರಿಗೆ ಯೋಗ ಶಿಕ್ಷಣ ನೀಡುತ್ತಿದ್ದಾರೆ. ಅದರ ಜೊತೆಗೆ ಸಮಾನಾಸಕ್ತರ ತಂಡ ಕಟ್ಟಿಕೊಂಡು ಅವರೆಲ್ಲರ ಆದಾಯದ ದೊಡ್ಡ ಪಾಲನ್ನು ಭಾರತದಲ್ಲಿನ ಗೋಸೇವೆ, ಗುರುಕುಲ ಶಿಕ್ಷಣ ಯೋಗ ಶಿಕ್ಷಣ ಹಾಗೂ ಆರ್ಥಿಕವಾಗಿ ಅಶಕ್ತರ ಕಲ್ಯಾಣ ಕಾರ್ಯಗಳಿಗಾಗಿ ವಿನಿಯೋಗಿಸುತ್ತಿದ್ದಾರೆ.