ಸಾರಾಂಶ
ನರಸಿಂಹರಾಜಪುರ: ಅಗ್ರಹಾರದ ಲೇಖಕಿ, ಬಹು ಮುಖ ಪ್ರತಿಭಾವಂತೆ ಭಾಗ್ಯ ನಂಜುಂಡಸ್ವಾಮಿ ಅವರಿಗೆ ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಸೌರಭ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಡುಪಿಯ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಹಾಗೂ ಮಂಗಳೂರಿನ ಕಥಾ ಬಿಂದು ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಡೆದ ಕಥಾ ಬಿಂದು ಗೀತಾ ಸಾಹಿತ್ಯೋತ್ಸವ ಸಮಾರಂಭದಲ್ಲಿ ಭಾಗ್ಯನಂಜುಂಡಸ್ವಾಮಿ ಅವರಿಗೆ ಸೌರಭ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಮಠದ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳು, ಸುಶೀಂದ್ರ ತೀರ್ಥ ಪಾದಂಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅವರು ಭಾಗ್ಯನಂಜುಂಡಸ್ವಾಮಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು.ಸಾಹಿತಿ ಭಾಗ್ಯನಂಜುಂಡಸ್ವಾಮಿ ಅವರು ಇದುವರೆಗೆ ಹಲವು ಪತ್ರಿಕೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. 300ಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ. ಸಮನ್ವಯತೆ ಎಂಬ ಪುಸ್ತಕ ಬರೆದಿದ್ದಾರೆ. ಆಕಾಶವಾಣಿ ಭದ್ರಾವತಿ ಕೇಂದ್ರದಲ್ಲಿ 50ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ. ಕಸಾಪ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ ಭಾಗ್ಯ ನಂಜುಂಡಸ್ವಾಮಿ ಅವರಿಗೆ ಈ ಹಿಂದೆ ಹರಿಹರಪುರ ಮಠದ ಶ್ರೀಗಳಿಂದ ಸಾಧಕ ಶ್ರೀ, ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಬಸವಜ್ಯೋತಿ ಪ್ರಶಸ್ತಿ, ಕನ್ನಡ ಸಿರಿ, ಲಲಿತ ಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಂಗೋಲಿಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.