ಲೇಖಕಿಯರ ಹೊಸ ವಿಷಯ, ವಿಮರ್ಶೆ ಬರೆಯಲು ಶ್ರಮಿಸಲಿ

| Published : Feb 17 2025, 12:33 AM IST

ಸಾರಾಂಶ

ಮಹಿಳೆಯರನ್ನು ಒಳಗೊಂಡಂತೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವವರು ತಮಗೇನೂ ಗೊತ್ತಿಲ್ಲವೆಂಬಂತೆ ಸುಮ್ಮನಿರದೇ, ಏನಾದರೂ ಹೊಸ ವಿಷಯಗಳ ಬಗ್ಗೆ ನಿರಂತರ ಬರೆಯಬೇಕು ಎಂದು ಹಿರಿಯ ಜಾನಪದ ತಜ್ಞ ಡಾ.ಬಸವರಾಜ ನೆಲ್ಲಿಸರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಾಹಿತಿ ಅನುಪಮ ವಿರುಪಾಕ್ಷಪ್ಪ ವಿರಚಿತ ಭಾವಗಳ ಬಿಂಬ ಕವನ ಸಂಕಲನ ಬಿಡುಗಡೆಯಲ್ಲಿ ಡಾ.ಬಸವರಾಜ ನೆಲ್ಲಿಸರ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಿಳೆಯರನ್ನು ಒಳಗೊಂಡಂತೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವವರು ತಮಗೇನೂ ಗೊತ್ತಿಲ್ಲವೆಂಬಂತೆ ಸುಮ್ಮನಿರದೇ, ಏನಾದರೂ ಹೊಸ ವಿಷಯಗಳ ಬಗ್ಗೆ ನಿರಂತರ ಬರೆಯಬೇಕು ಎಂದು ಹಿರಿಯ ಜಾನಪದ ತಜ್ಞ ಡಾ.ಬಸವರಾಜ ನೆಲ್ಲಿಸರ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಎ.ವಿ.ಪ್ರಕಾಶ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಹಿರಿಯ ಕವಿಯತ್ರಿ ಅನುಪಮ ಡಾ.ವಿರೂಪಾಕ್ಷಪ್ಪ ಅವರ 2ನೇ ಕವನ ಸಂಕಲನ ಭಾವಗಳ ಬಿಂಬ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಗೊತ್ತಿಲ್ಲವೆಂಬ ಕೀಳರಿಮೆ ಹೊಡೆದೋಡಿಸಿ, ಬರವಣಿಗೆ ಮೂಲಕ ಉತ್ತಮ ಸ್ಥಾನಕ್ಕೇರಬೇಕು ಎಂದರು.

ಜಾಗತೀಕರಣ, ಉದಾರೀಕರಣದ ಕಾಲಘಟ್ಟದಲ್ಲಿ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಗಮನ ನೀಡಬೇಕು. ಕಥೆ, ಕವನ, ಕಾದಂಬರಿ ಬರೆಯುವುದಲ್ಲಿ ತೊಡಗಿರುವಂತೆ ವಿಮರ್ಶೆ, ಸಂಶೋಧನೆಯತ್ತಲೂ ಲೇಖಕಿಯರು ಗಮನಹರಿಸಬೇಕು. ಜಾಗತೀಕರಣ, ಉದಾರೀಕರಣದ ದಟ್ಟ ಪ್ರಭಾವದಿಂದ ಬೂಟಾಟಿಕೆ ಬದುಕಿನಲ್ಲಿ ಎಲ್ಲರೂ ಕಳೆದು ಹೋಗುವಂತಾಗಿದೆ. ಈಗಿನ ವಾತಾವರಣದಲ್ಲಿ ಮಕ್ಕಳಿಗೆ ಮೊಬೈಲ್‌ ಒಂದು ಪ್ರಪಂಚವೇ ಆಗಿದೆ. ಈ ಪರಿಸ್ಥಿತಿಯಲ್ಲಿ ಸಾಹಿತ್ಯದ ಮೂಲಕ ವಿದ್ಯಾರ್ಥಿ, ಯುವಜನರು ಮುಂದಿನ ಜನಾಂಗಕ್ಕೆ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡಬೇಕು ಎಂದು ತಿಳಿಸಿದರು.

ಹಿರಿಯ ಲೇಖಕಿ ಅನುಪಮ ಡಾ.ವಿರೂಪಾಕ್ಷಪ್ಪ ತಮ್ಮ ಎರಡನೇ ಕವನ ಸಂಕಲನ ಭಾವಗಳ ಬಿಂಬದಲ್ಲಿ ಅಕ್ಷರಶಃ ಮಾನವೀಯತೆ, ಭಾವನೆ, ತಂದೆ-ತಾಯಿ ವಾತ್ಸಲ್ಯ, ಪ್ರಸ್ತುತ ವಿದ್ಯಮಾನಗಳನ್ನು ಒಳಗೊಂಡಂತೆ ತಾವು ಕಂಡ ಘಟನೆ, ಅನುಭವಗಳನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ. ಜೀವನ ಮೌಲ್ಯಗಳನ್ನು ಅನುಭವವೆಂಬ ಕಡುಗೋಲಿನಲ್ಲಿ ಕಡಿತಂತೆ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಸಾಹಿತ್ಯದ ಅಭಿರುಚಿ, ಶ್ರದ್ಧೆಯನ್ನು ಅನುಪಮ ಅವರ ಕೆಲ ಕವಿತೆಗಳಲ್ಲಿ ಕಾಣಬಹುದು. ಮತ್ತಷ್ಟು ಶ್ರಮಪಟ್ಟರೆ ಅನುಪಮ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಕವಿಯತ್ರಿಯಾಗಿ ಹೊರ ಹೊಮ್ಮಬಲ್ಲರು ಎಂದು ಡಾ.ಬಸವರಾಜ ನೆಲ್ಲಿಸರ ತಿಳಿಸಿದರು.

ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕಾರ್ಪೋರೇಟ್ ಸಂಸ್ಕೃತಿ ಕಾಲದಲ್ಲಿ ವೈದ್ಯರು ಹಣದ ಹಿಂದೆ ಹೋಗುವುದನ್ನು ಕಾಣುತ್ತಿದ್ದೇವೆ. ಅಂತಹ ಕಾಲಘಟ್ಟದಲ್ಲಿ ವೈದ್ಯರ ಪತ್ನಿಯಾದ ಅನುಪಮ ಅವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವುದು ಶ್ಲಾಘನೀಯ. ಬರವಣಿಗೆ ಒಮ್ಮೆಗೆ ಸಿದ್ಧಿಸದು. ಬರೆಯುತ್ತಾ ನಡೆದಂತೆ ಅದು ಸಿದ್ಧಿಸುತ್ತದೆ. ಅನುಪಮ ಅಂತಹ ಬರವಣಿಗೆಯನ್ನು ಸಿದ್ಧಿಸಿಕೊಳ್ಳಲಿ. ಡಾ.ವಿರೂಪಾಕ್ಷಪ್ಪ ತಮ್ಮ ಪತ್ನಿ ಅನುಪಮರ ಎರಡೂ ಕವನ ಸಂಕಲನ ಹೊರತಂದು, ಪತ್ನಿ ಪ್ರತಿಭೆಗೆ ಆಸರೆಯಾಗಿದ್ದಾರೆ ಎಂದರು.

ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕೆಂಬ ಇಲ್ಲಿನ ಸಾಹಿತಿಗಳು, ಸಾಹಿತ್ಯಾಸಕ್ತರು, ಪ್ರಜ್ಞಾವಂತರು, ಜನ ಸಾಮಾನ್ಯರ ಧ್ವನಿಗೆ ನಮ್ಮ ಸಹಮತವೂ ಇದೆ. ಸರ್ಕಾರದ ಮಟ್ಟದಲ್ಲೂ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಇನ್ನೂ ಹೆಚ್ಚಿನದಾಗಿ ಒತ್ತಡ ಹೇರುವ ಕೆಲಸ ಮಾಡಲಿದ್ದೇವೆ. ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ವರದಿಗಾರರ ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಮೂಲಕ ನೀವೂ ಒತ್ತಡ ಹೇರಿ. ನಾವೂ ಸಹ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಲತಾ ನರ್ಸಿಂಗ್ ಹೋಂನ ಡಾ.ವಿರೂಪಾಕ್ಷಪ್ಪ, ಸಾಹಿತಿ ಅನುಪಮ ವಿರೂಪಾಕ್ಷಪ್ಪ, ವರದಿಗಾರರ ಕೂಟದ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಬಿ.ಎನ್. ಮಲ್ಲೇಶ, ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ದಾವಣಗೆರೆ ವಿವಿ ಪ್ರಾಧ್ಯಾಪಕ ಡಾ.ಅಶೋಕಕುಮಾರ ಪಾಳೇದ, ಹಿರಿಯ ಪತ್ರಕರ್ತ ಜಿಗಳಿ ಪ್ರಕಾಶ, ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಇತರರು ಇದ್ದರು.

- - -

ಕೋಟ್‌ ಕವನ ಹೆಣೆಯುವುದು ಕಷ್ಟದ ಕೆಲಸ. ಕವನ ಭಾವನೆಗಳ ಅನುಸರಿಸಿ ಹುಟ್ಟುವಂತದ್ದು. ಮನಸ್ಸಿನ ಭಾವನೆಗಳು ಕವನದ ಮೂಲಕ ಹೊರಬರುತ್ತಿವೆ. ಬದುಕನ್ನು ಅರ್ಥಪೂರ್ಣ ಮಾಡುವಂತಹ ಸಾಹಿತ್ಯ ಹೊರಹೊಮ್ಮಬೇಕು. ಜನಪದ ಸಾಹಿತ್ಯ ಬದುಕನ್ನು ಕಟ್ಟಿಕೊಟ್ಟರೆ ಬಸವಾದಿ ಶರಣರ ವಚನ ಸಾಹಿತ್ಯ ಜೀವನ ಮಾರ್ಗದರ್ಶನ ನೀಡಿದ ವಿಭಿನ್ನ ಸಾಹಿತ್ಯ ಪ್ರಕಾರವಾಗಿದೆ

- ಶಿವಾನಂದ ತಗಡೂರು, ರಾಜ್ಯಾಧ್ಯಕ್ಷ, ಕಾರ್ಯನಿರತ ಪತ್ರಕರ್ತರ ಸಂಘ

- - - -16ಕೆಡಿವಿಜಿ2:

ದಾವಣಗೆರೆಯಲ್ಲಿ ಭಾನುವಾರ ಎ.ವಿ.ಪ್ರಕಾಶ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಹಿರಿಯ ಕವಿಯತ್ರಿ ಅನುಪಮ ಡಾ.ವಿರೂಪಾಕ್ಷಪ್ಪನವರ 2ನೇ ಕವನ ಸಂಕಲನ ಭಾವಗಳ ಬಿಂಬ ಲೋಕಾರ್ಪಣೆ ಸಮಾರಂಭ ನಡೆಯಿತು.