ಕನ್ನಡಪ್ರಭ ವಾರ್ತೆ ಶಿರಾ
ತಾಲೂಕು ಬುಕ್ಕಾಪಟ್ಟಣ ಹೋಬಳಿ ನೇರಳಗುಡ್ಡ ಸಮೀಪ ಪರವಾನಗಿ ಇಲ್ಲದೆ ನಡೆಸುತ್ತಿದ್ದ ನಿರಾಶ್ರಿತರ ಶಿಬಿರದ ಮೇಲೆ ಶಿರಾ ತಹಸೀಲ್ದಾರ್ ಅನಂದ್ ಕುಮಾರ್ ಹಾಗೂ ತುಮಕೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಅಂಬಿಕಾ ಜಂಟಿ ಕಾರ್ಯಾಚರಣೆ ನಡೆಸಿ ೬೪ ನಿರಾಶ್ರಿತರನ್ನು ರಕ್ಷಣೆ ಮಾಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಂದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಅಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿದರು. ಸರಿಯಾದ ದಾಖಲಾತಿ ಇಲ್ಲದೆ, ಪರವಾನಗಿ ಪಡೆಯದೆ, ಬೇದಸ್ತ ನಿರಾಶ್ರಿತರ ಆಶ್ರಯದ ಮನೆ ಎಂಬ ಹೆಸರಿನಲ್ಲಿ ನಡೆಸುತ್ತಿದ್ದ ಶಿಬಿರದ ಮೇಲೆ ದಾಳಿ ನಡೆಸಿ ಅಲ್ಲಿನ ಮಾನಸಿಕ ರೋಗಿಗಳು ಹಾಗೂ ವಯೋವೃದ್ಧರ ಸ್ಥಿತಿಯನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದರು. ಅಲ್ಲಿದ್ದ ೬೪ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿ ತುಮಕೂರು ಜಿಲ್ಲಾ ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರ ಮಾಡಿದರು.
ಈ ಕುರಿತು ಮಾಹಿತಿ ನೀಡಿದ ಶಿರಾ ತಹಸೀಲ್ದಾರ್ ಅನಂತ್ ಕುಮಾರ್ ರವರು, ನೇರಳಗುಡ್ಡ ಸಮೀಪ ನಿರಾಶ್ರಿತರ ಶಿಬಿರದಲ್ಲಿ ಬಲವಂತವಾಗಿ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ನಿರಾಶ್ರಿತರನ್ನು ಕರೆದುಕೊಂಡು ಬಂದು ಕೂಡಿ ಹಾಕಲಾಗಿದೆ. ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂಬ ಸಾಧನ ಮಹಿಳಾ ಸಮಾಜ ನೀಡಿದ ದೂರಿನ ಆಧಾರದ ಮೇಲೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪ ನಿರ್ದೇಶಕ ಅಧಿಕಾರಿಗಳು, ಪಿಡಿಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ದಾಳಿ ನಡೆಸಿ, ಅವರ ರಕ್ಷಣೆ ಮಾಡಲಾಗುತ್ತಿದೆ. ಇವರನ್ನು ಜಿಲ್ಲಾ ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸಿ ಇವರ ಮೂಲ ಸಂಬಂಧಿಕರನ್ನು ಪತ್ತೆ ಹಚ್ಚಿ ಮನೆಗಳಿಗೆ ತಲುಪಿಸುವ ಕೆಲಸ ಮಾಡಲಾಗುವುದು, ಶಿಬಿರದ ಮಾಲೀಕರನ್ನು ಕಾನೂನು ರೀತಿ ವಿಚಾರಣೆ ನಡೆಸಿ ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ಸೂಚನೆ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅಂಬಿಕಾ ಮಾತನಾಡಿ, ದೂರಿನ ಆಧಾರದ ಮೇಲೆ ನಾವು ಇಲ್ಲಿ ದಾಳಿ ನಡೆಸಿದಾಗ ನಿರಾಶ್ರಿತರಿಗೆ ಬೇಕಾದ ಮೂಲಭೂತ ಸೌಕರ್ಯಗಳಾದ ಗಾಳಿ, ನೀರು, ಬೆಳಕು, ಸ್ವಚ್ಛತೆ, ಶೌಚಾಲಯಗಳ ಕೊರತೆ ಎದ್ದು ಕಾಣುತ್ತಿದೆ ಹಾಗೂ ಕೆಲವರನ್ನು ಬಲವಂತವಾಗಿ ಇಲ್ಲಿಗೆ ಕರೆದುಕೊಂಡು ಬರಲಾಗಿದೆ. ಕೆಲವರಿಗೆ ದೈಹಿಕವಾಗಿ ಹಿಂಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ನಿರಾಶ್ರಿತರ ರಕ್ಷಣೆ ಮಾಡಿ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಿರಾ ಪಿಎಸ್‌ಐ ರೇಣುಕಾ ಯಾದವ್ ಹಾಗೂ ಸಿಬ್ಬಂದಿ, ನೇರಳಗುಡ್ಡ ಗ್ರಾಮ ಪಂಚಾಯಿತಿ ಪಿಡಿಒ ಸತೀಶ್ ಹಾಗೂ ಸಿಬ್ಬಂದಿ ಸೇರಿ ಹಲವು ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.