ಪ್ಯಾಸೆಂಜರ್ ಆಟೋ ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಪ್ಯಾಸೆಂಜರ್ ಆಟೋ ಪ್ರಯಾಣಿಕ ಮೃತಪಟ್ಟಿರುವ ಘಟನೆ ಎಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ಯಾಸೆಂಜರ್ ಆಟೋ ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಪ್ಯಾಸೆಂಜರ್ ಆಟೋ ಪ್ರಯಾಣಿಕ ಮೃತಪಟ್ಟಿರುವ ಘಟನೆ ಎಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಿಹಾರ ಮೂಲದ ಸಾಹಿತ್ಯರಾಜ್ (26) ಮೃತ ದುರ್ದೈವಿ. ಭಾನುವಾರ ಮುಂಜಾನೆ ಸುಮಾರು 3.20ಕ್ಕೆ ಎಚ್‌ಎಸ್‌ಆರ್ ಲೇಔಟ್‌ನ 14ನೇ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.
ಎರಡು ತಿಂಗಳ ಹಿಂದೆಯಷ್ಟೇ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ಸಾಹಿತ್ಯರಾಜ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದೊಮ್ಮಲೂರಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಭಾನುವಾರ ಮುಂಜಾನೆ ಕೆಲಸ ಮುಗಿಸಿಕೊಂಡು ಆಟೋ ರಿಕ್ಷಾದಲ್ಲಿ ಮನೆ ಕಡೆಗೆ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಎದುರಿನಿಂದ ಬಂದ ಬೈಕ್, ಕಾರನ್ನು ಹಿಂದಿಕ್ಕುವ ಭರದಲ್ಲಿ ಏಕಾಏಕಿ ಆಟೋಗೆ ಡಿಕ್ಕಿ ಹೊಡೆದಿದೆ.ಆಟೋದಲ್ಲಿ ತಲೆ ಹೊರಗೆ ಹಾಕಿ ಕುಳಿತಿದ್ದ ಸಾಹಿತ್ಯರಾಜ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಸಾಹಿತ್ಯರಾಜ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
