ಆರ್‌.ಟಿ.ನಗರದ ಸಿಬಿಐ ರಸ್ತೆಯಲ್ಲಿ ಗಾಳಿಪಟ ಹಾರಿಸಲು ಬಳಸಿದ ಮಾಂಜಾ ದಾರಕ್ಕೆ ಸಿಲುಕಿ ಜಿಬಿಎ ವಾಹನದ ಚಾಲಕನ ಕಾಲಿಗೆ ತೀವ್ರ ಗಾಯವಾದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್‌.ಟಿ.ನಗರದ ಸಿಬಿಐ ರಸ್ತೆಯಲ್ಲಿ ಗಾಳಿಪಟ ಹಾರಿಸಲು ಬಳಸಿದ ಮಾಂಜಾ ದಾರಕ್ಕೆ ಸಿಲುಕಿ ಜಿಬಿಎ ವಾಹನದ ಚಾಲಕನ ಕಾಲಿಗೆ ತೀವ್ರ ಗಾಯವಾದ ಘಟನೆ ನಡೆದಿದೆ.

ಜ.31ರಂದು ಬೆಳಗ್ಗೆ ಸಿಬಿಐ ರಸ್ತೆಯಲ್ಲಿ ಚಾಲಕ ನಾಗಾರ್ಜುನ ನಡೆದುಕೊಂಡು ಹೋಗುತ್ತಿದ್ದ. ಹರಿದ ಗಾಳಿ ಪಟದ ಮಾಂಜಾ ದ್ವಿಚಕ್ರ ವಾಹನದ ಚಕ್ರಕ್ಕೆ ಸಿಕ್ಕಿ ಬಿದ್ದಿತ್ತು. ರಸ್ತೆಗೆ ಅಪಾಯಕಾರಿಯಾಗಿ ಬಿದ್ದಿದ್ದ ಮಾಂಜಾವನ್ನು ತೆಗೆದು ಹಾಕಬೇಕು ಎಂದು ನಾಗರ್ಜುನ ಪ್ರಯತ್ನಿಸಿದ್ದಾನೆ. ಆದರೆ, ಅದೇ ವೇಳೆ ಬಂದ ಕಾರಿಗೆ ಸಿಲುಕಿ ಮುಂದಕ್ಕೆ ಚಲಿಸಿದಾಗ ನಾಗಾರ್ಜುನನ ಕಾಲಿಗೂ ಮಾಂಜಾ ದಾರ ಸಿಕ್ಕಿ ಹಾಕಿಕೊಂಡಿದೆ.

ದಾರ ಸಿಕ್ಕಿಕೊಂಡಿರುವುದರ ಅರಿವಿಲ್ಲದ ಕಾರಣ ಕಾರು ಚಲಿಸಿದ್ದು, ನಾಗಾರ್ಜುನನ ಕಾಲಿನ ಪಾದದ ಮೇಲ್ಭಾಗದಲ್ಲಿ ಚಾಕುವಿನಿಂದ ಎಳೆದಿರುವಂತಹ ತೀವ್ರ ಸ್ವರೂಪದ ಗಾಯವಾಗಿದೆ. ರಕ್ತಸ್ರಾವವಾಗಿ ನರಳುತ್ತಿದ್ದ ನಾಗಾರ್ಜುನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ದೃಶ್ಯ ಮಳಿಗೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಡ ಕಾರ್ಮಿಕನಾಗಿರುವ ನಾಗರ್ಜುನನ ವೈದ್ಯಕೀಯ ವೆಚ್ಚವನ್ನು ಗುತ್ತಿಗೆದಾರರು ಅಥವಾ ಜಿಬಿಎ ವತಿಯಿಂದ ಭರಿಸಿಕೊಡಬೇಕು ಎಂದು ಸಫಾಯಿ ಕರ್ಮಚಾರಿ ಸಂಘದ ಕಾರ್ಯದರ್ಶಿ ಚಂದ್ರಣ್ಣ ಒತ್ತಾಯಿಸಿದ್ದಾರೆ.