ನಾಗರಾಜನ ಪುಸ್ತಕ ಪ್ರೇಮಕ್ಕೆ ಮನಸೋಲದವರಿಲ್ಲ

| Published : Nov 09 2023, 01:00 AM IST / Updated: Nov 09 2023, 01:01 AM IST

ಸಾರಾಂಶ

ಆಟೋದಲ್ಲಿಯೇ ಗ್ರಂಥಾಲಯ ಸೃಷ್ಟಿಸಿದ ಆಟೋ ಚಾಲಕ ನಾಗರಾಜ ಗಬ್ಬೂರ್‌. 500ಕ್ಕೂ ಹೆಚ್ಚು ಪುಸ್ತಕ ಸಂಗ್ರಹಿದ ಹುಬ್ಬಳ್ಳಿಯ ಆಟೋ ಚಾಲಕ. 5 ವರ್ಷಗಳಿಂದ ಅಕ್ಷರ ಸೇವೆಗೈಯುತ್ತಿರುವ ಆಟೋ ಚಾಲಕ ಈತ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಗ್ರಂಥಾಲಯಕ್ಕೆ ಹೋಗುವವರ, ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ದಿನಗಳಲ್ಲಿ ಇಲ್ಲೊಬ್ಬ ಚಾಲಕ ತನ್ನ ಆಟೋದಲ್ಲಿಯೇ ಚಿಕ್ಕದಾದ ಗ್ರಂಥಾಲಯ ತೆರೆದಿದ್ದಾನೆ. 40ಕ್ಕೂ ಅಧಿಕ ಪುಸ್ತಕಗಳನ್ನಿಟ್ಟು ಬರುವ ಪ್ರಯಾಣಿಕರಿಗೆ ಓದುವ ಆಸಕ್ತಿ ಬೆಳೆಸುತ್ತಿದ್ದಾನೆ.

ಇಲ್ಲಿನ ಗೊಲ್ಲರ ಕಾಲನಿಯ ವೀರಾಪುರ ಓಣಿಯ ನಿವಾಸಿ ನಾಗರಾಜ ಗಬ್ಬೂರ್‌ ಕಳೆದ 10 ವರ್ಷಗಳಿಂದ ಆಟೋ ಚಾಲನೆಯನ್ನೇ ವೃತ್ತಿಯನ್ನಾಗಿಸಿಕೊಂಡವರು. ಮೊದಲಿನಿಂದಲೂ ಪುಸ್ತಕಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರಿಗೆ ಲೈಬ್ರರಿಗೆ ಹೋಗುವ ರೂಢಿ, ತನ್ನ ನಿತ್ಯದ ಕಾಯಕದ ಅವಸರದಲ್ಲಿ ಗ್ರಂಥಾಲಯಕ್ಕೆ ಹೋಗಲು ಆಗುವುದಿಲ್ಲ ಎಂದು ಯೋಚಿಸಿ ತಾನು ವೃತ್ತಿ ಮಾಡುವ ಆಟೋದಲ್ಲಿಯೇ ಚಿಕ್ಕದಾದ ಗ್ರಂಥಾಲಯ ತೆರೆದು ತಾನು ಪುಸ್ತಕ ಓದುವ ಮೂಲಕ ಬರುವ ಪ್ರಯಾಣಿಕರಿಗೂ ಪುಸ್ತಕ ಓದುವ ವ್ಯವಸ್ಥೆ ಮಾಡಿದ್ದಾರೆ.

ನಾಗರಾಜ ನಿತ್ಯ ದುಡಿಯುವುದು ₹500-600 ಮಾತ್ರ. ಇದರಲ್ಲಿಯೇ ಜೀವನದ ಬಂಡಿ ಸಾಗಬೇಕು. ಇಂತಹದರ ನಡುವೆಯೂ ತನ್ನ ಆಟೋದ ಹಿಂಬದಿಯ ಆಸನದ ಪಕ್ಕದಲ್ಲಿಯೇ ಖರ್ಚು ಮಾಡಿ ಪುಸ್ತಕಗಳನ್ನು ಇಡಲು 10ಕ್ಕೂ ಅಧಿಕ ಪಾಕೆಟ್‌ಗಳನ್ನು ಮಾಡಿಸಿದ್ದಾರೆ. ಒಂದೊಂದು ಪಾಕೆಟ್‌ನಲ್ಲಿ 4-5 ಬುಕ್‌ ಇಡುವ ವ್ಯವಸ್ಥೆ ಮಾಡಿದ್ದಾರೆ.

ಕನ್ನಡ ಪುಸ್ತಕಗಳೇ ಹೆಚ್ಚು:

ಆಟೋದಲ್ಲಿ ಯಾವುದೇ ಪುಸ್ತಕ ತೆರೆದರೂ ಅದು ಕನ್ನಡದ್ದೇ ಎಂಬುದು ವಿಶೇಷ. ಕನ್ನಡದ ಕವಿ, ಸಾಹಿತಿ, ನಾಡಿನ ಇತಿಹಾಸ ಸಾರುವ ಹಲವು ಪುಸ್ತಕಗಳು ಇಲ್ಲಿ ಲಭ್ಯ. ಅಲ್ಲದೇ ಯುವ ಕವಿ, ಸಾಹಿತಿಗಳ ಪುಸ್ತಕಗಳೂ ಇಲ್ಲಿ ಲಭ್ಯ.

500ಕ್ಕೂ ಹೆಚ್ಚು ಪುಸ್ತಕ:

ಕಳೆದ 5 ವರ್ಷಗಳಿಂದ ಆಟೋದಲ್ಲಿ ಚಿಕ್ಕದಾದ ಗ್ರಂಥಾಲಯ ನಿರ್ಮಿಸಿರುವ ನಾಗರಾಜ ಸುಮಾರು 500ಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಆಟೋದಲ್ಲಿ 40ರಿಂದ 50 ಪುಸ್ತಕಗಳನ್ನು ಸಂಗ್ರಹಿಸಿಡಲು ಚಿಕ್ಕದಾದ ಜಾಗವಿರುವ ಹಿನ್ನೆಲೆಯಲ್ಲಿ ಉಳಿದ ಪುಸ್ತಕಗಳನ್ನು ಮನೆಯಲ್ಲಿಟ್ಟಿದ್ದಾರೆ. ಪ್ರತಿ ಸೋಮವಾರಕ್ಕೊಮ್ಮೆ ಆಟೋದಲ್ಲಿರುವ ಪುಸ್ತಕಗಳನ್ನು ಬದಲಾಯಿಸುತ್ತಾ ಬಂದಿದ್ದಾರೆ.

ನೆಚ್ಚಿನ ಆಟೋ ಚಾಲಕ:

ನಾಗರಾಜ ಗಬ್ಬೂರ್‌ ಹುಬ್ಬಳ್ಳಿಯಲ್ಲಿ ಹಲವರ ನೆಚ್ಚಿನ ಆಟೋ ಚಾಲಕ. ನಗರದ ದೂರದ ಭಾಗಗಳಿಗೆ ತೆರಳಬೇಕಾದರೆ ಇವರಿಗೆ ಕರೆ ಮಾಡಿ ಆಟೋದಲ್ಲಿ ಹೋಗುತ್ತಾರೆ. ಕೆಲವು ಬಾರಿ ಇವರ ಆಟೋದಲ್ಲಿ ಪ್ರಯಾಣಿಸುವ ಯುವ ಕವಿ, ಸಾಹಿತಿಗಳು ನಾಗರಾಜ ಪುಸ್ತಕ ಪ್ರೀತಿ ಕಂಡು ಅವರೇ ಹತ್ತಾರು ಪುಸ್ತಕಗಳನ್ನು ದಾನವಾಗಿ ಕೊಟ್ಟಿದ್ದಾರೆ.

ಪುನೀತ್‌ ಹೆಸರಲ್ಲಿ ಅರವಟ್ಟಿಗೆ:

ಪುನೀತ್ ರಾಜಕುಮಾರ್‌ ಅವರ ಅಭಿಮಾನಿಯಾಗಿರುವ ನಾಗರಾಜ ಆಟೋ ಚಾಲನೆ ಆರಂಭವಾದಾಗಿನಿಂದ ತಮ್ಮ ಆಟೋದಲ್ಲಿ ಚಿಕ್ಕದಾದ ಅರವಟ್ಟಿಗೆ ಇರಿಸಿದ್ದಾರೆ. ಕಳೆದ 2 ವರ್ಷಗಳ ಹಿಂದೆ ನಿಧನರಾದ ಚಿತ್ರನಟ ಪುನೀತ್‌ ರಾಜಕುಮಾರ್‌ ಅವರ ಹೆಸರನ್ನು ಈ ಅರವಟ್ಟಿಗೆ ಇಟ್ಟಿದ್ದಾರೆ. ಆಟೋದಲ್ಲಿ ಗ್ರಂಥಾಲಯದೊಂದಿಗೆ ದಿನದ 24 ಗಂಟೆಗಳ ಕಾಲ ಅರವಟ್ಟಿಗೆ ಇರಿಸಿರುವುದು ವಿಶೇಷ.

ಯಾವ ಯಾವ ಪುಸ್ತಕಗಳು ಲಭ್ಯ

ಸಿದ್ಧಾರೂಢರ ತತ್ವಾಮೃತ, ಸಿದ್ಧಾರೂಢರ ಮಹಿಮೆ, ಹುಬ್ಬಳ್ಳಿಯ ಹೂವುಗಳು, ಚಿಗುರಿದ ಕನಸು, ಸಂತ ಶಿಶುನಾಳ ಶರೀಪರ ತತ್ವ ಪದಗಳು, ಎ.ಸಿ. ವಾಲಿ ಗುರುಗಳ ತೋಳಗಿ ಬೆಳಗಿತಯ್ಯ, ಬಸವಪಥ, ಬಸವಣ್ಣನವರ ವ್ಯಕ್ತಿಚಿತ್ರಮಾಲೆ, ಭಾವಾಂತರಂಗ ಕವನ ಸಂಕಲನ, ಚನ್ನಮಲ್ಲಿಕಾರ್ಜುನರ ವಚನಗಳು ಸೇರಿದಂತೆ ನೂರಾರು ಪುಸ್ತಕಗಳಿವೆ.

ಆಟೋ ಚಾಲಕ ನಾಗರಾಜ ಅವರನ್ನು ನಾನು 3-4 ವರ್ಷಗಳಿಂದ ನೋಡುತ್ತಿದ್ದೇನೆ. ಅವರ ಪುಸ್ತಕ ಪ್ರೇಮಕ್ಕೆ ಮನಃಸೋಲದವರೇ ಇಲ್ಲ. ಆಟೋದಲ್ಲಿಯೇ ಚಿಕ್ಕದಾದ ಗ್ರಂಥಾಲಯ ತೆರೆದು ಜನರಲ್ಲಿ ಅಕ್ಷರದ ಜ್ಞಾನ ಮೂಡಿಸುತ್ತಿರುವ ಕಾರ್ಯ ಇತರರಿಗೆ ಮಾದರಿ ಎನ್ನುತ್ತಾರೆ ಸ್ಥಳೀಯ ನಿವಾಸಿ ಫಕೀರಪ್ಪ ಮದ್ರಾಸಿ.

ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸ. ನಾನಷ್ಟೇ ಅಲ್ಲ ನನ್ನೊಂದಿಗೆ ಇನ್ನೊಬ್ಬರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ಆಟೋದಲ್ಲಿ ಚಿಕ್ಕದಾದ ಗ್ರಂಥಾಲಯ ತೆರೆದಿದ್ದೇನೆ. ಬರುವ ಪ್ರಯಾಣಿಕರು ಪುಸ್ತಕ ಓದಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎನ್ನುತ್ತಾರೆ ಆಟೋ ಚಾಲಕ ನಾಗರಾಜ ಗಬ್ಬೂರ್‌.