ಸಾರಾಂಶ
ಸಂಗೊಳ್ಳಿ ರಾಯಣ್ಣ ರಂಗಮಂದಿರದಲ್ಲಿ ಆಟೋ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ಬೀರೂರು.ನಾಡಿನ ನೆಲ, ಜಲ, ಭಾಷೆ ಸಂರಕ್ಷಣೆ ವಿಷಯದಲ್ಲಿ ಡಾ.ರಾಜಕುಮಾರ್ ನಂತರ ಉಂಟಾದ ನಾಯಕತ್ವದ ಕೊರತೆ ತುಂಬುವಲ್ಲಿ ಹಲವು ಕನ್ನಡಪರ ಸಂಘಟನೆಗಳು ಮತ್ತು ಆಟೋ ಚಾಲಕರು, ಮಾಲೀಕರ ಸಂಘಗಳು ಶ್ರಮಿಸುತ್ತಿವೆ ಎಂದು ಶಾಸಕ ಕೆ.ಎಸ್.ಆನಂದ್ ಪ್ರಶಂಸಿದರು.ಗಣಪತಿ ಪೆಂಡಾಲ್ ನ ಸಂಗೊಳ್ಳಿರಾಯಣ್ಣ ರಂಗಮಂದಿರದಲ್ಲಿ ಶನಿವಾರ ಸಂಜೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ನಡೆದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಸಂಘಟನೆ ಮೂಲಕ ಗುರುತಿಸಿಕೊಂಡಿರುವ ಆಟೋ ಸಂಘದವರಿಂದ ಕನ್ನಡ ಉಳಿಸಿ ಬೆಳೆಸುವ ಮಹತ್ತರ ಕಾರ್ಯ ನಡೆಯುತ್ತಿದೆ. ಸಂಘದಿಂದ ಪ್ರತಿವರ್ಷ ನಡೆಯುವ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಪಟ್ಟಣದ ಗೌರವ ಹೆಚ್ಚಿಸುತ್ತಿದೆ. ಹೊರಗಿನಿಂದ ಬರುವ ನಾಗರಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ, ನಿಗದಿತ ಬಾಡಿಗೆ ಪಡೆದು, ಸೇವೆಯಲ್ಲಿ ತೊಡಗುವ ಜೊತೆಗೆ ನಿಮ್ಮ ಜೀವನ ನಿರ್ವಹಣೆ ಮಾಡಿ ಇಂತಹ ಅದ್ಧೂರಿ ಕಾರ್ಯಕ್ರಮ ಆಯೋಜಿಸುತ್ತಿದ್ದೀರಿ ನಿಮ್ಮ ಕನ್ನಡ ಸೇವೆ ಮಾದರಿಯಾಗಿದೆ. ನಿಮ್ಮ ಸಂಘಟನೆ ನಿರಂತರವಾಗಿ ಬೆಳೆದು ಸಮಾಜಕ್ಕೆ ಕೊಡುಗೆಯಾಗಲಿ ಎಂದು ಆಶಿಸಿದರು.ನನ್ನ ಅನುದಾನದಲ್ಲಿ ಆಟೋ ಮತ್ತು ಟ್ಯಾಕ್ಸಿ ನಿಲ್ದಾಣಗಳಿಗೆ ಮೇಲ್ಚಾವಣಿ ಕಾಮಗಾರಿ ಪೂರ್ಣವಾಗಿದ್ದು ಶೀಘ್ರ ಉದ್ಘಾಟನೆಯಾಗಲಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷೆ ವನಿತಾಮಧು ಮಾತನಾಡಿ, ಪಂಪನಿಂದ ಕುವೆಂಪುವರೆಗೆ ರಚಿತವಾದ ಸಾಹಿತ್ಯ ಸಮಾಜದಲ್ಲಿ ಮಾನವೀಯ ಮೌಲ್ಯ ಮತ್ತು ಸಮಾನತೆ ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕನ್ನಡ ಕೇವಲ ಸಂವಹನದ ಮಾಧ್ಯಮವಲ್ಲ, ಅದು ಅಂತಃ ಕರಣ ದ ಅಭಿವ್ಯಕ್ತಿ. ಅಂತೆಯೇ ಸ್ವಾಭಿಮಾನ ಮತ್ತು ಸಮನ್ವಯ ಕನ್ನಡದ ಅಂತರಾಳ. ಕನ್ನಡ ಕಟ್ಟುವಲ್ಲಿ ಗ್ರಾಮೀಣ ಜನರ ಅದರಲ್ಲಿಯೂ ಆಟೊ ಚಾಲಕರಂತಹ ಕಟ್ಟಾಳುಗಳು ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಭಾಷೆ ಸಮೃದ್ಧವಾಗಿಸುವಲ್ಲಿ ಕಾರ್ಯಕ್ರಮ ನೆರವಾಗಿವೆ. ಶಿಲ್ಪ, ಚಿತ್ರಕಲೆ, ಸಂಗೀತ, ನಾಟ್ಯ, ಕೃಷಿ, ಆಳರಸರು, ಜನಸಾಮಾನ್ಯರು ಸೇರಿದಂತೆ ಎಲ್ಲ ರಂಗಗಳ ಸಹಕಾರದಿಂದ ಭಾಷೆ ಬಳುವಳಿ ಪಡೆದಿದೆ. ಇಂತಹ ಮಹತ್ತರ ಸಂಸ್ಕೃತಿ ಮತ್ತು ಭಾಷೆಯನ್ನು ಮುಂದಿನ ತಲೆಮಾರಿಗೂ ದಾಟಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಜನರು ಅಲ್ಲಿನ ನೆಲ-ಜಲಕ್ಕಾಗಿ ಹೋರಾಟ ಮಾಡಿದರೆ, ಕನ್ನಡಿಗರ ಕರುನಾಡಲ್ಲಿ ಭಾಷೆ ಉಳಿವಿಗೆ ಹೋರಾಟ ಮಾಡುವ ಸ್ಥಿತಿ ಇದೆ. ಕನ್ನಡ ಗೌರವಿಸುವ ಜೊತೆ ಭಾಷೆ ಬಳಸುವ ಮೂಲಕ ಮಾತ್ರ ಬೆಳೆಸಲು ಸಾಧ್ಯ. ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ನಮ್ಮ ಜಿಲ್ಲೆಯ ಗೊರುಚ ಅವರು ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಷಯ. ಸಮ್ಮೇಳನಕ್ಕೆ ಕನ್ನಡದ ಕಟ್ಟಾಳುಗಳಾದ ಆಟೋ ಚಾಲಕರು ಭಾಗವಹಿಸುವುದಾದರೆ ಅಲ್ಲಿನ ಎಲ್ಲ ವ್ಯವಸ್ಥೆ ಮಾಡುತ್ತೇನೆ ಎಂದರು.ಆಟೋ ಸಂಘದ ಈ ವರ್ಷದ ವಿಶೇಷ ಸನ್ಮಾನಿತರಾಗಿ ಕಡೂರಿನ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ದೇವರಾಜ್, ಮಾಜಿ ಸೈನಿಕ ಡಿ.ಕೆ. ಮಂಜುನಾಥ್, ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಅರುಣ್, ಬಸವರಾಜ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಮಿಡಿ ಕಿಲಾಡಿ ವಿನ್ನರ್ ರಾಕೇಶ್, ದೀಪಿಕಾ ಹಾಸ್ಯ ಕಾರ್ಯಕ್ರಮದ ಮೂಲಕ ನಗೆಗಡಲಲ್ಲಿ ತೇಲಿಸಿದರು.ಸಾಹಿತಿ ಇಮ್ರಾನ್ ಅಹಮದ್ ಬೇಗ್, ಚಿತ್ರನಟ ಧರ್ಮಣ್ಣ, ಇಂಜಿನಿಯರ್ ಸಾಗರ್, ದೊನ್ನೆಕೋರನಹಳ್ಳಿ ಉಮೇಶ್, ವೃತ್ತನಿರೀಕ್ಷಕ ಶ್ರೀಕಾಂತ್ ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್, ಶ್ರೀನಿವಾಸ್, ಸಂಘದ ಗೌರವಾಧ್ಯಕ್ಷ ಬಿ.ಕೆ.ಶಶಿಧರ್, ಅಡಿಕೆ ವರ್ತಕ ಸಿ.ಎಂ.ಚಂದ್ರಣ್ಣ, ಕೀರ್ತಿ ಗಾರ್ಮೆಟ್ಸ್ ಮಾಲೀಕ ಯತೀಶ್, ರವಿದಳವಾಯಿ, ಪಿಎಸೈ ಸಜಿತ್ ಕುಮಾರ್, ಉಪಾಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಸೋಮಪ್ಪ, ಆರ್.ಮಂಜುನಾಥ್, ಎ.ಬಾಬು, ಮುರಳಿ, ಶಿವಕುಮಾರ್, ಮುರಳಿ, ಶಿವಕುಮಾರ್ ಸೇರಿದಂತೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಇದ್ದರು.24 ಬೀರೂರು 1ಬೀರೂರಿನ ಸಂಗೊಳ್ಳಿರಾಯಣ್ಣ ರಂಗಮಂದಿರದಲ್ಲಿ ಶನಿವಾರ ಸಂಜೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಗಣ್ಯರನ್ನು ಶಾಸಕ ಕೆ.ಎಸ್.ಆನಂದ್ ಸನ್ಮಾನಿಸಿ ಗೌರವಿಸಿದರು.