ಮತ್ತೆ ಪ್ರತಿಭಟನೆಗೆ ಇಳಿದ ಆಟೋ ಚಾಲಕರು

| Published : Dec 06 2024, 08:57 AM IST

ಸಾರಾಂಶ

ರಿಕ್ಷಾ ಚಾಲಕರು ವಿಶೇಷವಾಗಿ ಡೋಲು, ಜಾಗಟೆ ಬಾರಿಸಿ, ಪ್ಲೆಕಾರ್ಡ್‌ಗಳನ್ನು ಹಿಡಿದು ವಿಶಿಷ್ಟವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಿಕ್ಷಾಗಳಿಗೆ ಇರುವ ಕಾನೂನನ್ನು ಇ-ರಿಕ್ಷಾಗಳಿಗೂ ವಿಸ್ತರಿಸುವಂತೆ ಒತ್ತಾಯಿಸಿ ರಿಕ್ಷಾ ಚಾಲಕರ ಪ್ರತಿಭಟನೆ ಮತ್ತೆ ಆರಂಭವಾಗಿದೆ.

ಈ ಹಿಂದೆ ರಿಕ್ಷಾ ಚಾಲಕರು ಅನಿರ್ದಿಷ್ಟ ಧರಣಿ ಕೈಗೊಂಡ ಸಂದರ್ಭ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ನೀಡಿದ ಭರವಸೆಗಳನ್ನು ಈಡೇರಿಸಬೇಕು. ಅಲ್ಲದೆ, ಡಿ.9ರಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿ ದ.ಕ. ಜಿಲ್ಲಾ ಅಟೋ ಚಾಲಕರ ಸಂಘ ಹಾಗೂ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಗುರುವಾರ ನಗರದ ಕ್ಲಾಕ್‌ ಟವರ್‌ ಬಳಿ ಪ್ರತಿಭಟನೆ ನಡೆಸಲಾಯಿತು.

ರಿಕ್ಷಾ ಚಾಲಕರು ವಿಶೇಷವಾಗಿ ಡೋಲು, ಜಾಗಟೆ ಬಾರಿಸಿ, ಪ್ಲೆಕಾರ್ಡ್‌ಗಳನ್ನು ಹಿಡಿದು ವಿಶಿಷ್ಟವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಸಂಘದ ಮುಖಂಡ ಮೋಹನ್‌ ಕೆ.ಇ. ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬ್ಯಾಟರಿ ಚಾಲಿತ ರಿಕ್ಷಾಗಳಿಗೆ ಬೇಕಾಬಿಟ್ಟಿ ಅನುಮತಿ ನೀಡಿರುವುದು ಸರಿಯಲ್ಲ. ಇದರಿಂದ ರಿಕ್ಷಾಗಳನ್ನೇ ನಂಬಿಕೊಂಡ ಕುಟುಂಬಗಳಿಗೆ ತೀರ ಸಮಸ್ಯೆಯಾಗಲಿದೆ. ಇದನ್ನು ತಡೆಗಟ್ಟಲು ತಮಿಳುನಾಡು ಮಾದರಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ದಯಾನಂದ ಶೆಟ್ಟಿ ಮಾತನಾಡಿ, ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ದ.ಕ. ಜಿಲ್ಲಾ ಆಟೋ ಚಾಲಕರ ಸಂಘದ ಅಧ್ಯಕ್ಷ ಬಿ.ವಿಷ್ಣುಮೂರ್ತಿ, ಪ್ರಮುಖರಾದ ಚಂದ್ರಹಾಸ ಕುಲಾಲ್‌, ಸತೀಶ್‌ ಕುಮಾರ್‌, ಅಲೋನ್ಸ್‌ ಡಿಸೋಜ, ರಜಾಕ್‌ ವಾಮಂಜೂರು, ವಸಂತ ದೇವಾಡಿಗ, ಪ್ರವೀಣ್‌ ಡಿಸೋಜ ಮತ್ತಿತರರು ಇದ್ದರು.