ಕನ್ನಡಪ್ರಭ ವಾರ್ತೆ ಕಾರವಾರ
ತಾಲೂಕಿನ ಶೇಜವಾಡದಲ್ಲಿರುವ ಗೋ ಗ್ಯಾಸ್ ಪಂಪ್‌ನಲ್ಲಿ ಕಳೆದ ಆರು ದಿನಗಳಿಂದ ಎಲ್‌ಪಿಜಿ ವಿತರಣೆಯನ್ನು ಏಕಾಏಕಿ ಸ್ಥಗಿತಗೊಳಿಸಿರುವುದು ಹಾಗೂ ಗ್ಯಾಸ್ ದರದಲ್ಲಿ ನಡೆಯುತ್ತಿರುವ ತಾರತಮ್ಯ ಖಂಡಿಸಿ ಆಟೋ ರಿಕ್ಷಾ ಚಾಲಕರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಜಿಲ್ಲಾ ಆಟೋ ಚಾಲಕರ ಮತ್ತು ಮಾಲಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣದ ವೃತ್ತದಿಂದ ಆರಂಭವಾದ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿದ್ದು, 30ಕ್ಕೂ ಅಧಿಕ ಮಂದಿ ಚಾಲಕರು ತಮ್ಮ ಆಟೋ ರಿಕ್ಷಾಗಳೊಂದಿಗೆ ಪಾಲ್ಗೊಂಡು ಖಾಸಗಿ ಗ್ಯಾಸ್ ಏಜೆನ್ಸಿಗಳ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ್ ಎಸ್.ಗೌಡ, ಜಿಲ್ಲೆಯ ಭಟ್ಕಳ, ಕುಮಟಾ, ಅಂಕೋಲಾ ಹಾಗೂ ಶಿರಸಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಎಲ್‌ಪಿಜಿ ದರದಲ್ಲಿ ಭಾರಿ ಅಂತರವಿದ್ದು, ಪ್ರತಿ ಲೀಟರ್‌ಗೆ ₹62ಗಳಿಂದ 100ವರೆಗೆ ಮನಬಂದಂತೆ ದರ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕಾರವಾರದಲ್ಲಿ ಪ್ರತಿ ಲೀಟರ್ ಗ್ಯಾಸ್‌ಗೆ ₹130 ನೀಡಿದರೆ ಮಾತ್ರ ಗ್ಯಾಸ್ ತರಿಸಿಕೊಡುವುದಾಗಿ ಪಂಪ್ ಮಾಲೀಕರು ಆಟೋ ಚಾಲಕರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಕಾರವಾರದಲ್ಲಿ ಒಂದೇ ಗ್ಯಾಸ್ ಪಂಪ್ ಇರುವುದರಿಂದ ಆಟೋ ಚಾಲಕರು ಅನಿವಾರ್ಯವಾಗಿ ಪರದಾಡುವಂತಾಗಿದ್ದು, ಇಸ್ರೇಲ್-ಇರಾನ್ ಯುದ್ಧದ ನೆಪವೊಡ್ಡಿ ಪಂಪ್ ಮಾಲೀಕರು ಈ ರೀತಿ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದು, ಕಾರವಾರದಲ್ಲಿ ಐಓಸಿಎಲ್‌ನಿಂದ ಮತ್ತೊಂದು ಗ್ಯಾಸ್ ಬಂಕ್ ಸ್ಥಾಪಿಸುವಂತೆ ಮನವಿ ಮಾಡಿದರು.ಕಳೆದ 6 ದಿನಗಳಿಂದ ಗ್ಯಾಸ್ ಇಲ್ಲದೆ ಆಟೋಗಳು ರಸ್ತೆಗಿಳಿಯದಿರುವುದರಿಂದ ಚಾಲಕರು ದೈನಂದಿನ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳ ಪರೀಕ್ಷೆಯ ಈ ಸಮಯದಲ್ಲಿ ಆದಾಯವಿಲ್ಲದೆ ಚಾಲಕರ ಕುಟುಂಬಗಳು ಉಪವಾಸ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ಸಮಸ್ಯೆಯ ಬಗ್ಗೆ ಮಾ. 10 ರಂದೇ ಮನವಿ ಮಾಡಿದ್ದರೂ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಶೀಘ್ರವೇ ಸಮಸ್ಯೆ ಬಗೆಹರಿಸಿ ಏಕರೂಪದ ದರ ನಿಗದಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರ ಮನೆಗಳಿಗೆ ಘೇರಾವ್ ಹಾಕಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಎಚ್ಚರಿಕೆ ನೀಡಿದ್ದಾರೆ.ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ನಿಶ್ಚಲ್ ನರೋನಾ ಅವರಿಗೆ ಆಟೋ ಚಾಲಕರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್, ಗ್ಯಾಸ್ ವಿತರಣೆ ಸಮಸ್ಯೆ ಕುರಿತಂತೆ ಈಗಾಗಲೇ ಉಪ ನಿರ್ದೇಶಕರ ಗಮನಕ್ಕೆ ತಂದು ಸಂಬಂಧಪಟ್ಟ ಗೋ ಗ್ಯಾಸ್ ಬಂಕ್ ಮಾಲೀಕರಿಗೆ ಪತ್ರ ಬರೆಯಲಾಗಿದ್ದು, ಅತಿ ಶೀಘ್ರದಲ್ಲಿಯೇ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ಇದ್ದರು.