ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಜಿಲ್ಲೆಯ ಎಲ್ಲಾ ಅರ್ಹ ಆಟೋಚಾಲಕರು ಸರ್ಕಾರದ ವಿವಿಧ ಯೋಜನೆಗಳಿಗೆ ನೋಂದಣಿ ಮಾಡಿಕೊಂಡು ಸವಲತ್ತುಗಳನ್ನು ಪಡೆಯುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಲಹೆ ಮಾಡಿದರು.ನಗರದ ಮರಳೂರು ದಿಣ್ಣೆಯ ಆಟೋ ನಿಲ್ದಾಣದಲ್ಲಿ ಕಾರ್ಮಿಕ ಇಲಾಖೆ,ಆಟೋಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಆಟೋಚಾಲಕರ ಇ-ಶ್ರಮ್, ಅಂಬೇಡ್ಕರ್ ಸಹಾಯ ಹಸ್ತ, ಕಾರ್ಮಿಕ ಇಲಾಖೆಯ ಸ್ಮಾರ್ಟ್ ಕಾರ್ಡ್ ಗಳಿಗೆ ನೋಂದಣಿ ಮಾಡಿಕೊಳ್ಳುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಯೋಜನೆಗಳ ನೋಂದಣಿಗೆ ವಾರ್ಡ್ ವಾರು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಯೋಜನೆಯಲ್ಲಿ ಅಪಘಾತ ಪರಿಹಾರ ನೆರವು, ಆಟೋಚಾಲಕರ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುತ್ತದೆ. ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡುವ ಮಕ್ಕಳಿಗೆ ವಾರ್ಷಿಕ 3 ಸಾವಿರ ರು. ನಂತರದ ತರಗತಿಗಳಿಗೆ 5 ಸಾವಿರರೂ., ಎಂಜಿನಿಯರಿಂಗ್, ಮೆಡಿಕಲ್ ಓದುವ ಮಕ್ಕಳಿಗೆ 8 ಸಾವಿರ ರು. ಈ ರೀತಿಯ ಸೌಲಭ್ಯಗಳಿವೆ. ಹೆರಿಗೆ ಸಮಯದಲ್ಲಿ ಎರಡು ಮಕ್ಕಳಿಗೆ 11 ಸಾವಿರ ರು.ತಾಯಿ ಪಡೆಯಬಹುದು.ಸ್ಮಾರ್ಟ್ ಕಾರ್ಡ್, ಅಂಬೇಡ್ಕರ್ ಸಹಾಯಾಸ್ತ, ಇ-ಶ್ರಮ್ ಯೋಜನೆಗಳಿಂದ ಆಟೋಚಾಲಕರು ಹಾಗೂ ಅವರ ಕುಟುಂಬದವರು ಸೌಲಭ್ಯ ಪಡೆಯಬಹುದುಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯ ಎಲ್ಲಾ ಅರ್ಹ ಆಟೋಚಾಲಕರು ಈ ಯೋಜನೆಗಳ ಪ್ರಯೋಜನೆ ಪಡೆಯಬೇಕು. ಸಾಧ್ಯವಾದಷ್ಟು ಆಟೋಚಾಲಕರ ಬಳಿಯೇ ಹೋಗಿ ನೋಂದಣಿ ಮಾಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದ ಶುಭಾಕಲ್ಯಾಣ್, ಆಟೋ ಚಾಲಕ ಸಂಘಟನೆಗಳು ಯೋಜನೆಗಳ ಬಗ್ಗೆ ಚಾಲಕರಿಗೆ ಮಾಹಿತಿ ನೀಡಿ ನೋಂದಣಿ ಮಾಡಿಸಿಕೊಳ್ಳಲು ಮನವರಿಕೆ ಮಾಡಿಕೊಡಬೇಕು ಎಂದರು. ಸಮಾಜದಲ್ಲಿ ಆಟೋ ಚಾಲಕರ ಸೇವೆ ಅನನ್ಯವಾದದ್ದು, ಆಂಬುಲೆನ್ಸ್ ಇಲ್ಲದ ಸ್ಥಳಗಳಲ್ಲಿ ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಆಟೋಗಳ ಸೇವೆ ಸಹಾಯವಾಗುತ್ತದೆ. ವಿದ್ಯಾರ್ಥಿಯಾಗಿದ್ದಾಗ ನಾನೂ ಆಟೋದಲ್ಲಿ ಶಾಲೆಗೆ ಹೋಗಿಬರುತ್ತಿದ್ದೆ. ಆಟೋಚಾಲಕರ ಸೇವೆಗೆ ನಾವು ಅಭಿನಂದನೆ ಹೇಳಬೇಕು ಎಂದರು.ರಾಜ್ಯ ಆಟೋಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಮದಕರಿ ಮಾತನಾಡಿ, ಆಟೋಚಾಲಕರಿಗೆ ವಿವಿಧ ಸವಲತ್ತು ನೀಡುವ ಸರ್ಕಾರದ ಯೋಜನೆಗಳನ್ನು ಆಟೋಚಾಲಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಕಾಳಜಿಯಿಂದ ಸಹಕರಿಸಿದ್ದಾರೆ. ಇತರೆ ಯಾವ ಜಿಲ್ಲೆಗಳಲ್ಲೂ ಈ ರೀತಿಯ ಕಾರ್ಯಕ್ರಮಗಳಾಗಿಲ್ಲ ಎಂದು ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು. 30ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಹಿರಿಯ ಆಟೋಚಾಲಕರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.ಜಿಲ್ಲಾ ಕಾರ್ಮಿಕ ಆಧಿಕಾರಿ ತೇಜಾವತಿ, ಸಮಿತಿ ಜಿಲ್ಲಾ ಆಟೋಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫೈರೋಜ್ ಅನ್ವರ್ ಖಾನ್, ಮುಖಂಡರಾದ ಅಲ್ತಾಫ್, ತೋಫಿಕ್, ರಾಮಸ್ವಾಮಿ, ಶ್ರೀದೇವಿ ರಮೇಶ್ ಮೊದಲಾದವರು ಭಾಗವಹಿಸಿದ್ದರು.