ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ತುಮಕೂರು ನಗರದಲ್ಲಿ ಪ್ರಯಾಣಿಕ ಆಟೋ ರಿಕ್ಷಾಗಳ ಕನಿಷ್ಟ ದರದ ಮಾಹಿತಿಯೇ ಇಲ್ಲದೆ ದಿನವೂ ಒಂದಿಲ್ಲೊಂದು ವಾಗ್ವಾದ ಆಗುತ್ತಿರುವ ಈಗಿನ ಸಂದರ್ಭದಲ್ಲಿ ತುಮಕೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆರ್.ಟಿ.ಐ. ಅರ್ಜಿಗೆ ಉತ್ತರಿಸುತ್ತ, ಆಟೋರಿಕ್ಷಾ ಮೀಟರ್ ದರದ ಬಗ್ಗೆ ಮಾಹಿತಿ ನೀಡುತ್ತಾ, ಮೊದಲ 2 ಕಿ.ಮೀ.ಗೆ ಕನಿಷ್ಟ ದರ ರೂ.25 ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ತುಮಕೂರಿನ ಸಾಮಾಜಿಕ ಕಾರ್ಯಕರ್ತ ಆರ್. ವಿಶ್ವನಾಥನ್ ಅವರು ಸಲ್ಲಿಸಿದ್ದ ಆರ್.ಟಿ.ಐ. ಅರ್ಜಿಗೆ ಈ ಮಾಹಿತಿ ಲಭ್ಯವಾಗಿದೆ. ಮೊದಲ 2 ಕಿ.ಮೀ.ಗೆ ಕನಿಷ್ಟ ದರ (ಮೂವರು ಪ್ರಯಾಣಿಕರಿಗೆ) ರೂ. 25 ಆಗಿರುತ್ತದೆ. ನಂತರದ ಪ್ರತಿ ಕಿ.ಮೀ.ಗೆ ದರ ರೂ. 13 ಆಗುತ್ತದೆ. ಕಾಯುವ ದರ (ವೇಟಿಂಗ್ ಚಾರ್ಜ್) ಮೊದಲ 5 ನಿಮಿಷ ಉಚಿತವಿದ್ದು, ನಂತರದ 15 ನಿಮಿಷಗಳಿಗೆ ದರ ರೂ. 5 ಆಗುತ್ತದೆ. ಇದೇ ರೀತಿ ಪ್ರಯಾಣಿಕರು ಒಯ್ಯುವ 20 ಕೆ.ಜಿ. ಲಗೇಜ್ ಉಚಿತವಿದ್ದು, ಗರಿಷ್ಟ 50 ಕೆ.ಜಿ. ಲಗೇಜ್ ಹಾಕಬಹುದಾಗಿದೆ. ರಾತ್ರಿ ವೇಳೆ ಆಟೋ ಪ್ರಯಾಣಕ್ಕೆ ಹೆಚ್ಚುವರಿ ದರ ನಿಗದಿ ಪಡಿಸಿದ್ದು, ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮೀಟರ್‌ನ ಒಂದೂವರೆಪಟ್ಟು ದರ ನಿಗದಿ ಪಡಿಸಲಾಗಿದೆ ಎಂದು ಆರ್.ಟಿ.ಒ. ಅವರು ಮಾಹಿತಿ ನೀಡಿದ್ದಾರೆ. 8,962 ಆಟೋಗಳು, 15 ಕಿ.ಮೀ. ವ್ಯಾಪ್ತಿ
ತುಮಕೂರು ಆರ್.ಟಿ.ಒ. ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 8962 ಪ್ರಯಾಣಿಕ ಆಟೊರಿಕ್ಷಾಗಳಿಗೆ ಪರವಾನಗಿ ನೀಡಲಾಗಿದೆ. ನಗರದ ಕಾರ್ಪೊರೇಷನ್‌ನಿಂದ 15 ಕಿ.ಮೀ. ವ್ಯಾಪ್ತಿಯೊಳಗೆ ಮಾತ್ರ ಸಂಚರಿಸಲು ಈ ಆಟೋಗಳಿಗೆ ಅನುಮತಿ ನೀಡಲಾಗಿದೆ ಎಂದು ಅರ್ಜಿದಾರ ಆರ್.ವಿಶ್ವನಾಥನ್ ಅವರಿಗೆ ಆರ್.ಟಿ.ಒ. ಉತ್ತರಿಸಿದ್ದಾರೆ. ಸಮವಸ್ತ್ರದ ಬಗ್ಗೆ ಮಾಹಿತಿ ಅಸ್ಪಷ್ಟಇದೇ ಅರ್ಜಿಯಲ್ಲಿ ಕರ್ತವ್ಯನಿರತ ಆಟೋ ಚಾಲಕರಿಗೆ ನಿಗದಿ ಪಡಿಸಿರುವ ಸಮವಸ್ತ್ರದ ವಿವರವನ್ನು ಕೇಳಲಾಗಿದ್ದು, ಇದಕ್ಕೆ ಆಟೋ ಚಾಲಕರಿಗೆ ಖಾಕಿ ಸಮವಸ್ತ್ರವನ್ನು ನಿಗದಿ ಪಡಿಸಲಾಗಿರುತ್ತದೆ ಎಂಬ ಅಸ್ಪಷ್ಟ ಉತ್ತರವನ್ನು ಆರ್.ಟಿ.ಒ. ನೀಡಿದ್ದಾರೆಂದು ಅರ್ಜಿದಾರ ವಿಶ್ವನಾಥನ್ ದೂರಿದ್ದಾರೆ. ಸಮವಸ್ತ್ರ ಎಂದರೆ ಏನು? ಖಾಕಿ ಅಂಗಿ ಮತ್ತು ಖಾಕಿ ಪ್ಯಾಂಟ್ ಧರಿಸಬೇಕೇ? ಖಾಕಿ ಅಂಗಿ ಎಂದರೆ ಅರ್ಧ ತೋಳಿನದೇ ಅಥವಾ ಪೂರ್ಣ ತೋಳಿನದೇ? ಎಂಬುದನ್ನು ಆರ್.ಟಿ.ಒ. ಸ್ಪಷ್ಟಪಡಿಸಬೇಕಿತ್ತು ಎಂದು ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ, ಪ್ರಯಾಣಿಕರ ಲಗೇಜ್ ವಿಚಾರದಲ್ಲಿ ಮೊದಲ 20 ಕೆ.ಜಿ. ಉಚಿತ. ನಂತರದ ಪ್ರತಿ 20 ಕೆ.ಜಿ. ರೂ. 2 ಎಂದು ಆರ್.ಟಿ.ಒ. ಉತ್ತರಿಸಿದ್ದು, ನಂತರದ ಪ್ರತಿ 20 ಕೆ.ಜಿ. ರು. 2 ಎಂದರೆ ಯಾವ ರೀತಿಯ ಲೆಕ್ಕವೆಂಬುದು ಅರ್ಥವಾಗುತ್ತಿಲ್ಲ. ಇದೇ ರೀತಿ ಪ್ರಯಾಣಿಕ ಆಟೋಗಳಿಗೆ ನಿಗದಿಪಡಿಸಿರುವ ನಿಯಮಾವಳಿಗಳ (ಉದಾಹರಣೆಗೆ ಪ್ರಥಮ ಚಿಕಿತ್ಸಾ ಸಲಕರಣೆ ಬಾಕ್ಸ್ ಇತ್ಯಾದಿ) ಬಗೆಗೂ ಆರ್.ಟಿ.ಒ. ಮಾಹಿತಿ ಕೊಟ್ಟಿಲ್ಲ ಎಂದು ಅರ್ಜಿದಾರ ಆರ್.ವಿಶ್ವನಾಥನ್ ಹೇಳಿದ್ದಾರೆ. ಬಾಕ್ಸ್..ಅಕ್ರಮ ಆಟೋಗಳಿಂದ 22 ಲಕ್ಷ ರು. ದಂಡ ಸಂಗ್ರಹ ತುಮಕೂರಿನಲ್ಲಿ ಸಂಚರಿಸುವ ಅಕ್ರಮ, ಅನಧಿಕೃತ ಆಟೋಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಅರ್ಜಿಯಲ್ಲಿ ಕೋರಿದ್ದ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಆರ್.ಟಿ.ಒ. ಅವರು 2023ರ ಏಪ್ರಿಲ್ 1 ರಿಂದ 2024 ರ ಮಾರ್ಚ್ 31 ರವರೆಗೆ 653 ಆಟೊರಿಕ್ಷಾಗಳ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು 14,55,400 ರೂ. ದಂಡ ಸಂಗ್ರಹಿಸಲಾಗಿದೆ. 2024ರ ಏಪ್ರಿಲ್ 1 ರಿಂದ ಜುಲೈ 31 ರವರೆಗೆ 352 ಆಟೊರಿಕ್ಷಾಗಳ ವಿರುದ್ಧ ಕ್ರಮ ಕೈಗೊಂಡು ಒಟ್ಟು 8,02,600 ರೂ. ದಂಡ ಸಂಗ್ರಹಿಸಲಾಗಿದೆ. ಹೀಗೆ ಒಟ್ಟು 1,005 ಆಟೊರಿಕ್ಷಾಗಳಿಂದ ಒಟ್ಟಾರೆ 22,58,00 ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.