ಸಾರಾಂಶ
ಮಂಜುನಾಥ ಕೆ.ಎಂ.
ಕನ್ನಡಪ್ರಭವಾರ್ತೆ ಮಂಡ್ಯಬುಡಕಟ್ಟು, ದಲಿತ ಮಹಿಳೆಯರು, ಪೌರ ಕಾರ್ಮಿಕರು, ಶವಗಳ ಪೋಸ್ಟ್ ಮಾರ್ಟಂ ಮಾಡುವವರ ಆತ್ಮಕಥನಗಳು ಕನ್ನಡದಲ್ಲಿ ಈವರೆಗೆ ಬಂದಿಲ್ಲ. ಈವರೆಗೆ ಬಂದಿರುವ ಆತ್ಮಕಥನಗಳಲ್ಲಿ ಮೇಲ್ಜಾತಿಯ ಆತ್ಮಕಥನಗಳಿವೆಯೇ ಹೊರತು, ಅಲೆಮಾರಿ ಸಮುದಾಯಗಳ ಆತ್ಮಕಥನಗಳು ದಾಖಲೆಯಾಗಿಲ್ಲ ಎಂದು ಲೇಖಕ ಅರುಣ್ ಜೋಳದ ಕೂಡ್ಲಿಗಿ ಹೇಳಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ ೧ರಲ್ಲಿ ಜರುಗಿದ ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳ ಕುರಿತ ಗೋಷ್ಠಿಯಲ್ಲಿ ಆತ್ಮಕಥನಗಳು ಕುರಿತು ಮಾತನಾಡಿದರು.ಈವರೆಗೆ ಬಂದಿರುವ ಆತ್ಮಕಥನಗಳು ನಿರ್ದಿಷ್ಟ ಜಾತಿ, ವರ್ಗಕ್ಕೆ ಸೀಮಿತಗೊಂಡಿರುವುದನ್ನು ಕಾಣುತ್ತೇವೆ. ಹಾಗಾದರೆ ಅಲೆಮಾರಿ ಸಮುದಾಯಗಳ ಅಂತರಂಗ, ಗೊಂದಲಿಗರು ಎದುರಿಸುವ ಬದುಕಿನ ಹೋರಾಟ ಕುರಿತು ಆತ್ಮಕಥನಗಳು ಬರುವುದು ಯಾವಾಗ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಈವರೆಗೆ ಪ್ರಕಟಗೊಂಡಿರುವ ಆತ್ಮಕಥನಗಳ ಸಂಖ್ಯೆ ೨೦೦ ಸಹ ದಾಟಿಲ್ಲ. ಈ ಪೈಕಿ ಅಲೆಮಾರಿ, ಬುಡಕಟ್ಟು ಸಮುದಾಯಗಳ ಆತ್ಮಕಥನಗಳು ಮಿತಿಯಲ್ಲಿವೆ. ದಲಿತ, ಬುಡಕಟ್ಟು ಲೋಕದ ಅದೆಷ್ಟೋ ಅನುಭವಗಳು ಆತ್ಮಕಥನಗಳಿಗೆ ಕನ್ನಡದ ದ್ವಾರದಲ್ಲಿ ಕಾದು ನಿಂತಿವೆ. ಆತ್ಮಕಥನದ ಮೂಲಕ ಹೊರಹೊಮ್ಮಬಹುದಾದ ಕಣ್ಣೋಟಗಳು ನಮ್ಮ ತಿಳಿವಳಿಕೆಗೆ ನಿಲುಕಿಲ್ಲ. ಕನ್ನಡದ ವಿವೇಕಕ್ಕೆ ದಕ್ಕಿಲ್ಲ ಎಂದರು.ಅಸಹಿಷ್ಣುತೆಯ ಕಾಲಘಟ್ಟದಲ್ಲಿ ಆತ್ಮಕಥನ ಬರೆಯುವುದು ದೊಡ್ಡ ಸವಾಲಿನ ಕೆಲಸ. ಭಯವಿಲ್ಲದೆ ಆತ್ಮಕಥನದಲ್ಲಿ ಸತ್ಯ ಹೇಳಿ ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ. ಸತ್ಯವನ್ನೂ ಹೇಳಲಿಕ್ಕಾಗದ ಕಾಲಘಟ್ಟಕ್ಕೆ ನಾವು ತಲುಪಿದ್ದೇವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದರು.
ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಡಾ.ಅಕ್ಕೈ ಪದ್ಮಶಾಲಿ ಅವರು ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಾಹಿತ್ಯ ಕುರಿತು ಮಾತನಾಡಿದರು. ಕನ್ನಡದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಬೆರಳೆಣಿಕೆಯಷ್ಟೂ ಕೃತಿಗಳು ಬಂದಿಲ್ಲ. ಈ ಸಮುದಾಯದ ಎದುರಿಸುತ್ತಿರುವ ಬೇಗುದಿ, ನೋವು, ತಲ್ಲಣಗಳನ್ನು ದಾಖಲಿಸುವ ಕೆಲಸವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಲೈಂಗಿಕ ಅಲ್ಪಸಂಖ್ಯಾತರಿಗೆ ಅಯ್ಯೋಪಾಪ ಎಂಬ ಮರುಕದ ಮಾತುಗಳು ಬೇಕಾಗಿಲ್ಲ. ಅವಕಾಶಗಳು ಬೇಕು. ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಸಮಾನತೆ ನೀಡಬೇಕು. ಈ ಸಮುದಾಯದ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರಲ್ಲದೆ, ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಚರ್ಚಿಸಲು ಪ್ರತ್ಯೇಕ ವೇದಿಕೆ ಬೇಕು ಎಂದು ಆಗ್ರಹಿಸಿದರು.ವಿಜ್ಞಾನ ಸಾಹಿತ್ಯ ಕುರಿತು ಮಾತನಾಡಿದ ಡಾ.ಬಿ.ಎಸ್.ಶೈಲಜಾ ಅವರು, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಬೆಳವಣಿಗಾಗಿರುವ ತೊಡರುಗಳು, ತಾಂತ್ರಿಕತೆಯ ತೊಡರುಗಳು ಕುರಿತು ತಿಳಿಸಿದರು. ಬೇರೆ ಪ್ರಕಾರದ ಸಾಹಿತ್ಯಕ್ಕೆ ಹೋಲಿಸಿದರೆ ವಿಜ್ಞಾನ ಸಾಹಿತ್ಯ ಹೆಚ್ಚು ಜನಪ್ರಿಯವಲ್ಲ. ಈ ಸಾಹಿತ್ಯವನ್ನು ಓದುವವರು ಸಹ ಕಡಿಮೆ. ಬಾಲ್ಯದಿಂದಲೇ ಮಕ್ಕಳಿಗೆ ವಿಜ್ಞಾನ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವಂತಾಗಬೇಕು. ವಿಜ್ಞಾನ ಸಾಹಿತ್ಯಕ್ಕೆ ಹೆಚ್ಚು ಉತ್ತೇಜನ ಸಿಗಬೇಕು. ತಾಂತ್ರಿಕ ತೊಡಕುಗಳ ನಿವಾರಣೆಯ ಕ್ರಮಗಳಾಗಬೇಕು ಎಂದು ಆಶಿಸಿದರು.
ಪ್ರಬಂಧ ಸಾಹಿತ್ಯ ಕುರಿತು ಪತ್ರಕರ್ತ ಚ.ಹ.ರಘುನಾಥ ಅವರು ಮಾತನಾಡಿದರು. ಹಿರಿಯ ಲೇಖಕಿ ಬಾನು ಮುಷ್ತಾಕ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿ.ಸಿ.ಉಮಾಶಂಕರ್, ಗೊರಳ್ಳಿ ಜಗದೀಶ್, ಡಾ.ಗುಡಂಗಟಿ ವಿಠಲ್ ಹಾಗೂ ಸಿ.ಎಂ.ಕ್ರಾಂತಿಸಿಂಹ ಕಾರ್ಯಕ್ರಮ ನಿರ್ವಹಿಸಿದರು.