ಹಾವೇರಿ ನಗರದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿ ಆಟೋರಿಕ್ಷಾ ಮಾಲಕರು ಹಾಗೂ ಚಾಲಕರ ಸಂಘದ ಮುಖಂಡರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಾವೇರಿ: ನಗರದಾದ್ಯಂತ ರಸ್ತೆಗಳು ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿ ಕೈಗೊಂಡು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಹಾವೇರಿ ಆಟೋರಿಕ್ಷಾ ಮಾಲಕರು ಹಾಗೂ ಚಾಲಕರ ಸಂಘದ ಮುಖಂಡರು ಲೋಕೋಪಯೋಗಿ ಇಲಾಖೆ

ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನಗರದಲ್ಲಿ ಸಾವಿರಾರು ಆಟೋರಿಕ್ಷಾ ಚಾಲಕರು ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುತ್ತಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ವಿವಿಧ ವರ್ಗದ ಜನರು ಆಟೋರಿಕ್ಷಾಗಳನ್ನು ಅವಲಂಬಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಂದ ನಗರಕ್ಕೆ ಬರುವವರಿಗೂ ಆಟೋರಿಕ್ಷಾಗಳು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿವೆ. ಆದರೆ, ನಗರದ ಬಹುತೇಕ ರಸ್ತೆಗಳು ಹದಗೆಟ್ಟಿರುವುದರಿಂದ ಆಟೋರಿಕ್ಷಾಗಳ ಸಂಚಾರ ದುಸ್ತರವಾಗಿದೆ. ರಸ್ತೆಗಳಲ್ಲಿ ಗುಂಡಿ ಹೆಚ್ಚಾಗಿದ್ದು, ವಾಹನಗಳು ಪದೇಪದೇ ದುರಸ್ತಿಗೆ ಬರುತ್ತಿವೆ. ಇದರಿಂದ ಚಾಲಕರು ತಮ್ಮ ದಿನನಿತ್ಯದ ಆದಾಯದ ಬಹುಪಾಲನ್ನು ವಾಹನಗಳ ನಿರ್ವಹಣೆಗಾಗಿಯೇ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಮಾಲಕರು ಹಾಗೂ ಚಾಲಕರ ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡರು.ಅಲ್ಲದೆ, ಮಳೆಗಾಲದಲ್ಲಿ ರೈಲ್ವೆ ನಿಲ್ದಾಣ ರಸ್ತೆಯಿಂದ ಅಕ್ಕಮಹಾದೇವಿ ವೃತ್ತದ ನಡುವಿನ ರೈಲ್ವೆ ಕೆಳಸೇತುವೆ ಬಳಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಚರಂಡಿ ಅಗಲೀಕರಣ ಮಾಡಿ, ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಕೈಗೊಳ್ಳಬೇಕು ಎಂದು ನಗರಸಭೆ ಅಯುಕ್ತರಿಗೂ ಮನವಿ ಸಲ್ಲಿಸಿ ಆಟೋ ಚಾಲಕರು ಆಗ್ರಹಿಸಿದ್ದಾರೆ.ನಗರಸಭೆಯು ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ನಗರದ ಹದಗೆಟ್ಟ ರಸ್ತೆಗಳನ್ನು ತ್ವರಿತವಾಗಿ ದುರಸ್ತಿಗೊಳಿಸಬೇಕು. ರೈಲ್ವೆ ಕೆಳಸೇತುವೆ ಬಳಿಯ ಚರಂಡಿ ಸಮಸ್ಯೆಗೂ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಟೋ ಮಾಲಕರು ಹಾಗೂ ಚಾಲಕರ ಸಂಘ ಒತ್ತಾಯಿಸಿದೆ.