ಕಾರ್ಗಿಲ್ ಯುದ್ಧದ ಸಂಕಷ್ಟದ ಸಂದರ್ಭದಲ್ಲಿ ಆರಂಭಗೊಂಡ ಈ ವಿಶಿಷ್ಟ ಧಾರ್ಮಿಕ ಸಂಕಲ್ಪದ ಮೂಲಕ ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರಿಗೆ ಆಧ್ಯಾತ್ಮಿಕ ಹಾಗೂ ಮಾನಸಿಕ ಬಲ ದೊರೆಯಲಿ.
ಶಿರಸಿ: ಭಾರತೀಯರ ಆರಾಧ್ಯ ದೈವ ಶ್ರೀಕೃಷ್ಣ ಪರಮಾತ್ಮನ ಅವತಾರ ದಿನವಾದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶುಕ್ರವಾರ ಭಾರತದ ಯೋಧರ ರಕ್ಷಣೆಗಾಗಿ ಸ್ವರ್ಣವಲ್ಲಿಯಲ್ಲಿ ಲಕ್ಷ ತುಳಸಿ ಅರ್ಚನೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹಾಗೂ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀಮಠದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಸಂಕಲ್ಪದಂತೆ, ದೇಶದ ಗಡಿ ಕಾಯುತ್ತಿರುವ ವೀರ ಸೈನಿಕರ ರಕ್ಷಣೆ, ಆರೋಗ್ಯ, ವಿಜಯ ಹಾಗೂ ಕ್ಷೇಮಕ್ಕಾಗಿ 27ನೇ ವರ್ಷದ ತುಳಸಿ ಅರ್ಚನೆ ನಡೆಯಿತು.ಕಾರ್ಗಿಲ್ ಯುದ್ಧದ ಸಂಕಷ್ಟದ ಸಂದರ್ಭದಲ್ಲಿ ಆರಂಭಗೊಂಡ ಈ ವಿಶಿಷ್ಟ ಧಾರ್ಮಿಕ ಸಂಕಲ್ಪದ ಮೂಲಕ ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರಿಗೆ ಆಧ್ಯಾತ್ಮಿಕ ಹಾಗೂ ಮಾನಸಿಕ ಬಲ ದೊರೆಯಲಿ, ಅವರ ಆರೋಗ್ಯ ಉತ್ತಮವಾಗಿರಲಿ ಮತ್ತು ದೇಶದ ರಕ್ಷಣಾ ಕಾರ್ಯದಲ್ಲಿ ಅವರು ಯಶಸ್ವಿಯಾಗಲಿ ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸಲಾಯಿತು.ಶುಕ್ರವಾರ ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ಲಕ್ಷ ತುಳಸಿ ಅರ್ಚನೆ, ವಿಶೇಷ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
೮ ಲಕ್ಷ ಸಂಖ್ಯೆಯ ತುಳಸಿ ದಳಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸಿ, ದೇಶದ ಹಿತ ಹಾಗೂ ಸೈನಿಕರ ರಕ್ಷಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ರಾಷ್ಟ್ರದ ಹಿತರಕ್ಷಣೆ ಹಾಗೂ ಗಡಿ ಕಾಯುತ್ತಿರುವ ಸೈನಿಕರ ವಿಜಯ ಮತ್ತು ಕ್ಷೇಮಕ್ಕಾಗಿ ಹಮ್ಮಿಕೊಂಡ ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಋತ್ವಿಜರು ಭಾಗವಹಿಸಿ ನಿಷ್ಠೆ ಹಾಗೂ ಭಕ್ತಿಯಿಂದ ಲಕ್ಷ ತುಳಸಿ ಅರ್ಚನೆಯನ್ನು ನೆರವೇರಿಸಿದರು.ಸ್ವರ್ಣವಲ್ಲೀ, ನಡಗೋಡ, ಬನವಾಸಿ, ಉಮ್ಮಚಗಿ ಹಾಗೂ ಶಾರದಾಂಬಾ ಪಾಠಶಾಲೆಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿವಿಧ ಸೇವಾ ಕಾರ್ಯಗಳನ್ನು ನಿರ್ವಹಿಸಿದರು.ಅರ್ಚನೆಯ ಬಳಿಕ ಮಹಾಮಂಗಳಾರತಿ ಹಾಗೂ ಭಕ್ತರಿಗೆ ತೀರ್ಥಪ್ರಸಾದ ವಿತರಣೆ ನಡೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀಮಠಕ್ಕೆ ಆಗಮಿಸಿದ್ದ ಭಕ್ತರು ವಿಶೇಷ ಪೂಜೆ ಹಾಗೂ ಲಕ್ಷ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು. ಕೇಶವ ಹೆಗಡೆ ಗಡೀಕೈ ದಂಪತಿ ಯಜಮಾನರಾಗಿ ಕಾರ್ಯ ಮಾಡಿದರು.