- ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಸ್ಪರ್ಧೆಯಿಂದ "ಕೊಡ್ಲಿ ಪೆಟ್ಟು " ಯಾರಿಗೆ?
- ಸಿ.ಎಂ.ಇಬ್ರಾಹಿಂ ಬೆಂಬಲಿತ "ವಜ್ರ "ದ ಅಭ್ಯರ್ಥಿ ಜಾದೂ ನಡೆದಿದೆಯಾ?- ಮುಸ್ಲಿಂ ಧರ್ಮದ ನಾಯಕನ ತಲೆದಂಡಕ್ಕೆ ಕಾರಣವಾದ ಉಪ ಸಮರ
- - -ನಾಗರಾಜ ಎಸ್. ಬಡದಾಳ್
ಕನ್ನಡಪ್ರಭ ವಾರ್ತೆ ದಾವಣಗೆರೆ
ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಕಾಂಗ್ರೆಸ್ಸಿನ ಭದ್ರಕೋಟೆಯೆಂದೇ ಪ್ರಸಿದ್ಧಿ ಪಡೆದಿದ್ದ, ಹಿರಿಯ ಶಾಸಕರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ ಇಲ್ಲದ ಮೊದಲ ಉಪ ಚುನಾವಣೆಗೆ ಕಾರಣವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಈ ಬೆನ್ನಲ್ಲೇ ಬಾಜಿ ಕಟ್ಟಿ ಮೀಸೆ ತಿರುವವರ ಸಂಖ್ಯೆಯೂ ಕ್ಷೇತ್ರ, ಜಿಲ್ಲೆಯಲ್ಲಿ ಕಡಿಮೆಯೇನಿಲ್ಲ!
ದಾವಣಗೆರೆ ಲೋಕಸಭಾ ಕ್ಷೇತ್ರದ ಬಹುತೇಕ ವಿಧಾನಸಭಾ ಕ್ಷೇತ್ರಗಳು ಒಮ್ಮೆ ಕಾಂಗ್ರೆಸ್, ಇನ್ನೊಮ್ಮೆ ಬಿಜೆಪಿ ಒಲಿದಿವೆ. ಸಾಂಪ್ರಾದಾಯಿಕ ವೈರಿಗಳಾದ ಕಾಂಗ್ರೆಸ್-ಬಿಜೆಪಿ ಮಧ್ಯೆ ಸ್ಪರ್ಧೆ ಇದ್ದರೆ, ಹರಿಹರ ಕ್ಷೇತ್ರ ಕಾಂಗ್ರೆಸ್- ಬಿಜೆಪಿ- ಜೆಡಿಎಸ್ ತ್ರಿಕೋನ ಸ್ಪರ್ಧೆಗೆ ಹೆಸರಾಗಿದೆ. ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರ ಮಾತ್ರ ಶಾಮನೂರು ಶಿವಶಂಕರಪ್ಪ ಅವರಿಂದಾಗಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿ, ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು.ಬದಲಾದ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿ ಕಾಯ್ದುಕೊಂಡಿದ್ದ ಅಲ್ಪಸಂಖ್ಯಾತ ಮುಸ್ಲಿಮರು ಮೊದಲ ಸಲ ಟಿಕೆಟ್‌ಗೆ ಧ್ವನಿ ಎತ್ತಿದ್ದರಿಂದ ಆ ಪಕ್ಷದಲ್ಲೂ ಎರಡು ಗುಂಪುಗಳಾಗಿ, ಸಮುದಾಯದಲ್ಲೂ 3-4 ಗುಂಪುಗಳಾಗಿದ್ದರಿಂದ ಉಪ ಚುನಾವಣೆಯಲ್ಲಿ ಮತಗಳ ವಿಭಜನೆಯಿಂದಾಗಿ ಕಾಂಗ್ರೆಸ್ಸಿಗೆ ಒಂದಿಷ್ಟು ತಲೆನೋವು ತಂದಿದೆ. ಲೋಕಸಭೆ ಚುನಾವಣೆ ವೇಳೆ ಮನೆಯೊಂದು, ಹಲವು ಬಾಗಿಲಂತಾಗಿದ್ದ ಬಿಜೆಪಿಗೆ ಬಂದಿದ್ದ ಸ್ಥಿತಿಯನ್ನೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಿದ್ದು ಸೋಜಿಗ. ಇದರ ಜೊತೆಗೆ ಎಸ್‌ಡಿಪಿಐ, ಪಕ್ಷೇತರ ಅಭ್ಯರ್ಥಿ ಸಹ ಕಾಂಗ್ರೆಸ್ಸಿಗೆ ತಲೆನೋವು ತಂದಿದ್ದಾರೆ.
ಉಪ ಚುನಾವಣೆ ಕಾರಣಕ್ಕೆ ಮುಸ್ಲಿಮರಿಗೆ, ಅಹಿಂದ ವರ್ಗಕ್ಕೆ ಟಿಕೆಟ್ ಕೊಡುವಂತೆ ಕೇಳಿದ್ದ ಕೆ.ಅಬ್ದುಲ್ ಜಬ್ಬಾರ್ ತಲೆದಂಡವಾಗಿದೆ. ಇನ್ನೂ ಆರು ಜನರನ್ನು ಕಾಂಗ್ರೆಸ್ ಜಿಲ್ಲಾ ಸಮಿತಿಯೇ ಉಚ್ಚಾಟನೆಗೆ ಕೆಪಿಸಿಸಿ ಶಿಸ್ತು ಸಮಿತಿಗೆ ಶಿಫಾರಸು ಮಾಡಿದೆ. ಉಪ ಚುನಾವಣೆ ಕಾಂಗ್ರೆಸ್ಸಿಗೆ ಪ್ರತಿಷ್ಟೆಯದ್ದಾಗಿದ್ದು, ಬಿಜೆಪಿ ಇಲ್ಲಿ ಫಲಿತಾಂಶದಿಂದ ಗಳಿಸುವುದು, ಕಳೆದುಕೊಳ್ಳುವುದೇನೂ ಇಲ್ಲ. ಆದರೆ, ದಿಕ್ಕಿಗೆ ಒಬ್ಬರಂತಾಗಿದ್ದ ಬಿಜೆಪಿ ನಾಯಕರಿಗೆ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಿದ್ದು ಈ ಉಪ ಚುನಾವಣೆ. 2028ರ ಉಪ ಚುನಾವಣೆ ಗೆದ್ದರೆ ಬಿಜೆಪಿ ಶಕ್ತಿ ಉದ್ದೀಪನಗೊಳಿಸುವುದು ಸತ್ಯ.ದಕ್ಷಿಣ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಎರಡೂ ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಿರುವುದು ಹೊಸ ಮುಖಗಳೇ. ಕಾಂಗ್ರೆಸ್ಸಿನ ಸಮರ್ಥ ಎಂ. ಶಾಮನೂರುಗೆ ರಾಜಕೀಯ ಹೊಸದಲ್ಲ. ಆದರೆ, ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದು ಚೊಚ್ಚಲ ಪ್ರಯತ್ನ. ಅದೇ ರೀತಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪಗೂ ರಾಜಕಾರಣ ಹೊಸದಲ್ಲ. ಚುನಾವಣೆ ಕಣಕ್ಕೆ ಇಳಿದಿದ್ದು ಇದೇ ಮೊದಲು. ಹಾಗಾಗಿ, ಸಾಂಪ್ರಾದಾಯಿಕ ವೈರಿಗಳಾದ ಕಾಂಗ್ರೆಸ್- ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇದ್ದು, ಎಸ್‌ಡಿಪಿಐ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹಾಗೂ ಮುಸ್ಲಿಂ ಅಭ್ಯರ್ಥಿಗಳ ಪಡೆಯುವ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಮೇಲ್ನೋಟಕ್ಕೆ ಕಾಂಗ್ರೆಸ್- ಬಿಜೆಪಿ ಮಧ್ಯೆ ಇದೇ ಮೊದಲ ಬಾರಿಗೆ ಸಮಾನ ಪೈಪೋಟಿಯೆಂಬ ಮಾತು ಕೇಳಿಬರುತ್ತಿವೆ. ಈ ಹಿಂದೆ ಶಾಮನೂರು ಶಿವಶಂಕರಪ್ಪ- ಯಶವಂತ ರಾವ್ ಜಾಧವ್ ಸ್ಪರ್ಧೆ ಮಾಡಿದ್ದಾಗ ಹೇಗೆ ಕೆಲವೇ ಸಾವಿರಗಳ ಮತಗಳ ಅಂತರದಲ್ಲಿ ಫಲಿತಾಂಶ ಬಂದಿತ್ತೋ, ಈ ಉಪ ಚುನಾವಣೆಯಲ್ಲೂ ಅಂತಹದ್ದೇ ಸಾಧ್ಯತೆ ಇವೆ ಎನ್ನಲಾಗಿದೆ. ಉಭಯ ಪಕ್ಷಗಳ ಪೈಕಿ ಯಾರ ಗೆಲುವು ಎಂಬುದನ್ನು ಎಸ್‌ಡಿಪಿಐ, ಪಕ್ಷೇತರ ಮುಸ್ಲಿಂ ಅಭ್ಯರ್ಥಿಗಳು ಪಡೆದ ಮತಗಳು ನಿರ್ಣಯಿಸುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ಸಿಗೆ ಹೇಗೆ ಕೆಲವರಿಂದ ವಿರೋಧ ವ್ಯಕ್ತವಾಗಿ ಕಂಡುಬಂದಿತ್ತೋ ಅಂತಹದ್ದು ಮತ ಚಲಾವಣೆ ವೇಳೆ ಇರಲಿಲ್ಲ. ಕಾಂಗ್ರೆಸ್ಸಿಗೆ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲರೂ ಕೈ ಹಿಡಿದಿದ್ದಾರೆಂಬುದು ಕಾಂಗ್ರೆಸ್ಸಿನವರ ಹೇಳಿಕೆ.ಮತ್ತೊಂದು ಕಡೆ ಬಿಜೆಪಿ ಕಾಂಗ್ರೆಸ್ ಪಾಳೆಯದ ಅತೃಪ್ತಿ, ಮುಸ್ಲಿಂ ಸಮುದಾಯದ ಮುನಿಸಿನ ಲಾಭ ತನಗೆ ಆಗಬಹುದೆಂಬ ನಿರೀಕ್ಷೆಯಲ್ಲಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಜಾತಿ ಆಟವೂ ಜೋರಾಗಿಯೇ ನಡೆದಿರುವುದು ಕಂಡುಬರುತ್ತಿದೆ. ಎರಡೂ ಅಭ್ಯರ್ಥಿಗಳ ಪರವಾಗಿ ಆಯಾ ಸಮುದಾಯದ ಜಾತಿ ಮತಗಳು, ಅಹಿಂದ ವರ್ಗಗಳ ಮತಗಳು ಸಿಕ್ಕಿವೆಯೆಂದರೆ, ಮುಸ್ಲಿಮರ ಮತ ವಿಭಜನೆ ಆಗಿದೆಯೆಂಬ ವಾದವಿದೆ. ಸದ್ಯಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರ ಫಲಿತಾಂಶವು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಪ್ರತಿಷ್ಟೆಯದ್ದಾಗಿದೆ. ಅದೇ ರೀತಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ ಅವರ ಮಧ್ಯೆ ಇದ್ದ ವೈಮನಸ್ಸು ಮರೆಯಾಗಲು ಬಿಜೆಪಿ ಇಲ್ಲಿ ಗೆಲುವು ಸಾಧಿಸಲೇಬೇಕಿದೆ.
ಚಿತ್ರದುರ್ಗದಲ್ಲಿ ಮೇ 9ರಂದು ನಡೆಯುವ ಬಿಎಸ್‌ವೈ ಅಭಿಮಾನೋತ್ಸವ ಮತ್ತಷ್ಟು ರಂಗೇರಬೇಕೆಂದರೆ ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಿದೆ. ಬಿಜೆಪಿಗೆ ಸದಾ ಕಬ್ಬಿಣದ ಕಡಲೆಯಾಗಿದ್ದು, ದಕ್ಷಿಣದಲ್ಲಿ ಸೋಲಿಲ್ಲದ ಸರದಾರನಾಗಿ ಪ್ರತಿನಿಧಿಸುತ್ತಿದ್ದ ಶಾಮನೂರು ಶಿವಶಂಕರಪ್ಪ ಇಲ್ಲದ ಮೊದಲ ಚುನಾವಣೆಯಲ್ಲಾದರೂ ದಕ್ಷಿಣ ಕ್ಷೇತ್ರದಲ್ಲಿ ಕಮಲ ಅರಳಿಸುವ ಬಿಜೆಪಿ ದಶಕಗಳ ಕನಸಿಗೆ ಇಲ್ಲಿ ಸಾವಿರಾರು ಕಾರ್ಯಕರ್ತರೇ ಶಕ್ತಿಯಾಗಿದ್ದಾರೆ. ಕ್ಷೇತ್ರದ ಮತದಾರರು ಯಾರ ಮುಡಿಗೆ ವಿಜಯಮಾಲೆ ಹಾಕಿದ್ದಾರೆ ಎಂಬುದಕ್ಕೆ ಇನ್ನು ಕೆಲ ತಾಸುಗಳಲ್ಲೇ ಸ್ಪಷ್ಟ ಚಿತ್ರಣವೂ ಸಿಗಲಿದೆ.- - -
(ಬಾಕ್ಸ್-1)* ಬಾಜಿ, ಡಿಸ್ಕೌಂಟ್, ಬೆಟ್ಟಿಂಗ್ ಭರಾಟೆ!
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆಂಬ ಬಗ್ಗೆ ಎರಡೂ ಪ್ರಮುಖ ಪಕ್ಷಗಳು ಮತ್ತು ಅಭ್ಯರ್ಥಿಗಳ ಬೆಂಬಲಿಗರು ಬಾಜಿ ಕಟ್ಟಿದ್ದಾರೆಂಬ ಮಾತುಕೇಳಿ ಬರುತ್ತಿವೆ. ಇದೊಂದು ಉಪ ಚುನಾವಣೆಯಾಗಿದ್ದು, ಅಂತಹ ಬಾಜಿ ಕಟ್ಟಿ ಮೀಸೆ ತಿರುವುವಂತಹ ಧೈರ್ಯ ಯಾರೂ ಮಾಡಿಲ್ಲ. ಆದರೂ, ಕೆಲವರು ತಮ್ಮ ನಾಯಕರನ್ನು ಮೆಚ್ಚಿಸಲು, ಗಮನ ತಮ್ಮೆಡೆ ಸೆಳೆಯುವುದಕ್ಕೇನೋ ಎಂಬಂತೆ ತಮ್ಮ ಊರಿನಲ್ಲಿ ಅಷ್ಟು ಲಕ್ಷ ಬೆಟ್ ಕಟ್ಟಿದ್ದಾರೆ, ಇಷ್ಟು ಹೊಲ ಪಣಕ್ಕೆ ಇಟ್ಟಿದ್ದಾರೆ ಎಂದೆಲ್ಲಾ ಹೇಳುತ್ತಿದ್ದಾರೆ. ಮತ್ತೆ ಕೆಲವರು ಡಿಸ್ಕೌಂಟ್ ಕೇಳಿ, ತಡರಾತ್ರಿವರೆಗೂ ಕಾಯುತ್ತೇವೆಂಬ ಮಾತುಗಳನ್ನು ಹೇಳಿರುವುದು ಹಳೆ ಭಾಗದಲ್ಲಿ, ಗ್ರಾಮೀಣ ಪ್ರದೇಶದಲ್ಲೂ ಕೇಳಿಬರುತ್ತಿದೆ. ಆದರೆ, ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾನೆಂದು ಹೇಳಿಕೊಳ್ಳುವಂತಹ ಧೈರ್ಯ ಯಾವುದೇ ಪಕ್ಷ ತೋರದಿದ್ದರೂ, ದಾವಣಗೆರೆ ದಕ್ಷಿಣ ಕ್ಷೇತ್ರ ಫಲಿತಾಂಶ ಕೆಲವೇ ಸಾವಿರ ಮತಗಳ ಅಂತರದ್ದೆಂಬುದು ಸ್ವತಃ ಉಭಯ ಪಕ್ಷಗಳಿಗೂ ಗೊತ್ತಿರುವ ಸತ್ಯವಾಗಿದೆ.- - -
(ಬಾಕ್ಸ್-2)* ದಕ್ಷಿಣ ಕ್ಷೇತ್ರದ ಒಟ್ಟು ಮತದಾನ ಪ್ರಮಾಣ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಏ.9ರಂದು ನಡೆದ ಉಪ ಚುನಾವಣೆಯಲ್ಲಿ ಶೇ.68.55ರಷ್ಟು ಮತದಾನವಾಗಿತ್ತು. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ ಶೇ.84.36ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ.65.59ರಷ್ಟು ಮತದಾನವಾಗಿತ್ತು. ಇದೀಗ ಮೇ 4ರಂದು ದಾವಣಗೆರೆ ಡಿಆರ್‌ಆರ್ ಶಾಲೆಯ ಮತ ಎಣಿಕಾ ಕೇಂದ್ರದಲ್ಲಿ ಕ್ಷೇತ್ರ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇಡೀ ಜಿಲ್ಲೆ, ರಾಜ್ಯದ ಗಮನವನ್ನು ದಿವಂಗತ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಸೆಳೆದಿದೆ.
- - -(-ಫೋಟೋಗಳಿವೆ).