ಸಾರಾಂಶ
ಜಿಲ್ಲೆಯ ಎಲ್ಲ ಗ್ರಾಮಗಳ ವ್ಯಾಪ್ತಿಯಲ್ಲಿ ಪೂರೈಕೆಯಾಗುವ ನೀರು ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
- ಜಿಪಂ ಸಭಾಂಗಣದಲ್ಲಿ ನೀರಿನ ಪರೀಕ್ಷೆಗಳ ಕೈಗೊಳ್ಳುವ ಬಗ್ಗೆ ತರಬೇತಿ ಕಾರ್ಯಾಗಾರ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಜಿಲ್ಲೆಯ ಎಲ್ಲ ಗ್ರಾಮಗಳ ವ್ಯಾಪ್ತಿಯಲ್ಲಿ ಪೂರೈಕೆಯಾಗುವ ನೀರು ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ಎಚ್2ಎಸ್ ವೈಲ್ಸ್ ಉಪಯೋಗಿಸಿ ನೀರಿನ ಪರೀಕ್ಷೆಗಳನ್ನು ಕೈಗೊಳ್ಳುವ ಬಗ್ಗೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಕೆಲವೆಡೆ ಕಲುಷಿತ ನೀರು ಸಾರ್ವಜನಿಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದರಿಂದಾಗಿ ಕುಡಿಯುವ ನೀರಿನ ಪರೀಕ್ಷೆ, ನೀರು ಕಲುಷಿತವಾಗಲು ಕಾರಣಗಳು- ದುಷ್ಪರಿಣಾಮಗಳು ಹಾಗೂ ನೀರು ಕಲುಷಿತವಾಗದಂತೆ ನಿರ್ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರವಾಗಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.ನೀರು ಪರೀಕ್ಷೆ ವರದಿ ನೀಡಿ:
ಪೈಪ್‌ಲೈನ್ ನೆಟ್‌ವರ್ಕ್‌ನಲ್ಲಿ ಎಲ್ಲಿಯಾದರೂ ಸೋರಿಕೆಯಾಗಿದ್ದು ಕಂಡುಬಂದರೆ ಅದನ್ನು ಪ್ಲಗ್ ಮಾಡಿ, ಸೋರಿಕೆ ಆಗದಂತೆ ಕ್ರಮ ವಹಿಸಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮದ ನೀರಿನ ಮೂಲಗಳ ಶುದ್ಧತೆ ಕುರಿತು ವರ್ಷದಲ್ಲಿ ಕನಿಷ್ಠ 4 ಬಾರಿ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು. ಈ ರೀತಿ ಪರೀಕ್ಷೆ ನಡೆಸಲು ಪ್ರತಿ ಗ್ರಾಮ ಪಂಚಾಯಿತಿಗೆ ಎಫ್.ಟಿ.ಕೆ. ಫೀಲ್ಡ್ ಟೆಸ್ಟ್ ಕಿಟ್ ನೀಡಲಾಗಿದೆ. ಎಲ್ಲ ತಾಲೂಕು ಹಾಗೂ ಜಿಲ್ಲಾಮಟ್ಟದ ಲ್ಯಾಬ್‌ಗಳಲ್ಲಿ ನೀರು ಸಂಗ್ರಹಾಗಾರರಿಂದ ನೀರು ಸಂಗ್ರಹಿಸಿ, ನೀರಿನ ಮೂಲಗಳ ಪರೀಕ್ಷೆ ನಡೆಸಿ, ವರದಿಯನ್ನು ನೀಡಲು ತಿಳಿಸಿದರು.ಕಾರ್ಯಕ್ರಮದಲ್ಲಿ ನೀರಿನ ಬಾವಿ, ಕೆರೆ, ನದಿ, ನಳ ನೀರು, ಟ್ಯಾಂಕ್‌ಗಳ ನೀರಿನ ಗುಣಮಟ್ಟದ ಬಗ್ಗೆ ಗ್ರಾಮ ಪಂಚಾಯತಿಗಳಲ್ಲಿ ಎಫ್.ಟಿ.ಕೆ. ಟೆಸ್ಟ್ ಮೂಲಕ ಪರೀಕ್ಷಿಸಿ ನಂತರವೇ ಬಳಸಲು `ಶುದ್ಧ ನೀರಿನ ಬಳಕೆ ನಿಮ್ಮ ಆದ್ಯತೆಯಾಗಲಿ` ಎಂಬ ಶೀರ್ಷಿಕೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಜಿಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ಉತ್ತಮ್, ರಾಘವೇಂದ್ರ ಹೊನ್ನಳ್ಳಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಸೋಮ್ಲ ನಾಯಕ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಜಗದೀಶ್ ಬಿ.ಟಿ., ಪ್ರಯೋಗಾಲಯ ಸಿಬ್ಬಂದಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.- - -
ಬಾಕ್ಸ್ ಕಾನೂನು ಕ್ರಮದ ಎಚ್ಚರಿಕೆ ಮಳೆಗಾಲ ಆರಂಭ ಆಗಿರುವುದರಿಂದ ಸಾಂಕ್ರಾಮಿಕ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಈ ಸಮೀಕ್ಷೆ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಜೊತೆ ಮನೆಗೆ ತೆರಳಿ ಸಮೀಕ್ಷೆ ಸಮಯದಲ್ಲಿ ನಿಂತ ನೀರಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳಾದ ಹೂವಿನ ಕುಂಡ, ಹಳೆಯ ಟೈರ್, ಎಣ್ಣೆ ಡ್ರಮ್‌ಗಳಲ್ಲಿ ಕಂಡುಬಂದ ಲಾರ್ವ ತಾಣಗಳನ್ನು ತಕ್ಷಣ ನಾಶಕ ಟೇಮಿಪಾಸ್ ದ್ರಾವಣ ಹಾಕಿ ಸೊಳ್ಳೆಗಳಿಂದ ಹರಡುವ ರೋಗ ತಡೆಯಬೇಕು. ಕಲುಷಿತ ನೀರಿನಿಂದ ಸಮಸ್ಯೆಗಳು ಬಂದರೆ ಸಂಬಂಧಿಸಿದ ಗ್ರಾಪಂ ಪಿಡಿಒ ಮತ್ತು ಸಹಾಯಕ ಎಂಜಿನಿಯರ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಎಚ್ಚರಿಸಿದರು.- - -
-1ಕೆಡಿವಿಜಿ42ಃ:ದಾವಣಗೆರೆಯ ಜಿಪಂ ಸಭಾಂಗಣದಲ್ಲಿ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಅಧ್ಯಕ್ಷತೆಯಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.