ಪರಿಸರ ಹಾನಿ ತಪ್ಪಿಸಿ, ರಕ್ಷಣೆ ಕಾಳಜಿ ವಹಿಸಿ

| Published : Jun 15 2024, 01:05 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ನಗರೀಕರಣ ಹಾಗೂ ಕೈಗಾರೀಕರಣದಿಂದ ಆಗುತ್ತಿರುವ ಪರಿಸರ ಹಾನಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ರಕ್ಷಿಸುವ ಕೆಲಸ ಮಾಡುವ ಹೊಣೆ ನಮ್ಮೇಲ್ಲರ ಮೇಲಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರೀಕರಣ ಹಾಗೂ ಕೈಗಾರೀಕರಣದಿಂದ ಆಗುತ್ತಿರುವ ಪರಿಸರ ಹಾನಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ರಕ್ಷಿಸುವ ಕೆಲಸ ಮಾಡುವ ಹೊಣೆ ನಮ್ಮೇಲ್ಲರ ಮೇಲಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ನವನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿರುವ ಸಭಾಭವನದಲ್ಲಿ ಮುರನಾಳ ಅಖಂಡೇಶ್ವರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ನಗರೀಕರಣದಿಂದ ಪರಿಸರ ಹಾಳಾಗುತ್ತಿದ್ದು, ಪರಿಸರ ಸಂರಕ್ಷಣೆಯ ಗುರಿ ಹೊಂದುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೂಪಾ.ವಿ.ಕೆ ಮಾತನಾಡಿ, ಪರಿಸರದ ನಾಶದಿಂದ ಪ್ರಸ್ತುತ ದಿನಮಾನಗಳಲ್ಲಿ ವಾತಾವರಣದಲ್ಲಿ ತೀವ್ರ ಬದಲಾವಣೆಯಾಗುತ್ತಿದ್ದು, ಇದರಲ್ಲಿ ಪರಿಸರ ಸಂರಕ್ಷಣೆ ಪ್ರಮುಖ ಪಾತ್ರವಹಿಸಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಅರಣ್ಯ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅತಿಥಿಯಾಗಿದ್ದ ಮುರನಾಳ ಅಖಂಡೇಶ್ವರ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಬಿ.ಹೆಚ್.ನಾಯ್ಕರ್ ಮಾತನಾಡಿ, ಮಾನವ ಪರಿಸರವನ್ನು ಸಂರಕ್ಷಣೆ ಮಾಡಿದರೆ, ಪರಿಸರವು ಮಾನವನನ್ನು ಸಂರಕ್ಷಣೆಯನ್ನು ಮಾಡುತ್ತದೆ ಎಂಬ ಕಿವಿಮಾತಿನ ಮೂಲಕ ಮಾನವನ ಜೀವನದಲ್ಲಿ ಪರಿಸರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ಅರ್ಥೈಸಿದರು. ಸದರಿ ಕಾರ್ಯಕ್ರಮಕ್ಕಾಗಿ ತಮ್ಮ ಶಾಲೆಯನ್ನು ಅಯ್ಕೆ ಮಾಡಿಕೊಂಡಿರುವುದಕ್ಕಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಬಾಗಲಕೋಟೆಯ ಎಲ್ಲ ಸಿಬ್ಬಂದಿಗೆ ಸಮಾಜ ವಿಜ್ಞಾನ ಶಿಕ್ಷಕ ಬಿ.ಹೆಚ್.ನಾಯ್ಕರ್‌ ಧನ್ಯವಾದಗಳನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತೋವಿವಿಯ ಕುಲಸಚಿವ ಡಾ.ಟಿ.ಬಿ.ಅಳ್ಳೊಳ್ಳಿ ಮಾತನಾಡಿ, ವೇದ ಹಾಗೂ ವಚನ ಸಾಹಿತ್ಯದಲ್ಲಿ ಶರಣರು ತಿಳಿಸಿರುವ ಪರಿಸರದ ಸಂರಕ್ಷಣೆಯ ಮಹತ್ವದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಅಲ್ಲದೇ, ಸಾಲು ಮರದ ತಿಮ್ಮಕ್ಕನವರ ಸಾಧನೆಯಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರೇಪಿತರಾಗಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಪೂರ್ವದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಎಲ್ಲ ಗಣ್ಯ ವ್ಯಕ್ತಿಗಳಿಂದ ಹಾಗೂ ವಿದ್ಯಾರ್ಥಿಗಳಿಂದ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಗಂಗನಗೌಡ ಪಾಟೀಲ, ಅಖಂಡೇಶ್ವರ ಪ್ರೌಢ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಆಸೀಫ್‌ ಬಾಗವಾನ ವಂದಿಸಿದರು. ಈರಣ್ಣ ಬುಳ್ಳಾ ನಿರೂಪಿಸಿದರು.