ಬೇಸಿಗೆಯಲ್ಲಿ ಆದಷ್ಟು ಕುರುಕಲು ತಿಂಡಿಯಿಂದ ದೂರವಿರಿ

| Published : Mar 20 2024, 01:19 AM IST

ಸಾರಾಂಶ

ಕಡು ಬೇಸಿಗೆಯಲ್ಲಿ ಕುರುಕಲು ತಿಂಡಿಗಳನ್ನು (ಜಂಕ್‌ ಫುಡ್‌) ತಿಂದು ಅನಾರೋಗ್ಯಕ್ಕೆ ಒಳಗಾಗುವ ಬದಲು ಪೌಷ್ಟಿಕಾಂಶವಿರುವ ಹಣ್ಣು, ತರಕಾರಿ ಸೇವಿಸಿ.

ಚಿತ್ರದುರ್ಗ: ಕಡು ಬೇಸಗೆ ಕಾಲ ಆರಂಭವಾಗಿದ್ದು, ನಿರ್ಜಲೀಕರಣ ಉಂಟಾಗದಂತೆ ಶುದ್ಧ ಕುಡಿಯುವ ನೀರು ಹಾಗೂ ತಜ್ಞರು ಸೂಚಿಸಿದಂತೆ ಪೌಷ್ಟಿಕಾಂಶವಿರುವ ಆಹಾರ, ಹಣ್ಣುಗಳು, ತರಕಾರಿ, ಕಾಲಮಾನಕ್ಕೆ ತಕ್ಕಂತೆ ಆಹಾರ ಪದಾರ್ಥಗಳ ಬಳಕೆ ಮಾಡಬೇಕು ಎಂದು ಚಿತ್ರದುರ್ಗ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.

ಚಿತ್ರದುರ್ಗ ತಾಲೂಕಿನ ಗೊಡಬನಹಾಳ್ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಓಬೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಬೇಸಿಗೆ ಕಾಲದಲ್ಲಿ ಆರೋಗ್ಯ ಕಾಪಾಡುವ ಬಗ್ಗೆ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಾರ್ವಜನಿಕ ಆರೋಗ್ಯ ಅರಿವು ಮೂಡಿಸಿ ಮಾತನಾಡಿದರು.

ಬೇಸಿಗೆ ಕಾಲವಾದ್ದರಿಂದ ತಾಪಮಾನ ಹೆಚ್ಚುತ್ತಿದ್ದು, ಕುರುಕಲು(ಜಂಕ್‌ ಫುಡ್‌) ತಿಂಡಿಗಳ ಕಡೆಗೆ ಗಮನ ಹರಿಸಬಾರದು. ಜಾತ್ರೆ, ಹಬ್ಬ ಹರಿದಿನಗಳಲ್ಲಿ ಬೀದಿಯಲ್ಲಿ ಕೊಯ್ದಿಟ್ಟು ಮಾರುವ ಹಣ್ಣುಗಳನ್ನು ಸೇವಿಸಬಾರದು ಎಂದರು.

ಬೇಸಿಗೆಯಲ್ಲಿ ದ್ರಾಕ್ಷಿ, ಕಿತ್ತಳೆ ಸೇವಿಸುವುದು ಒಳಿತು. ಕಲ್ಲಂಗಡಿ ಹಣ್ಣಿನಲ್ಲಿ ನೀರು ಸಮೃದ್ಧವಾಗಿದ್ದು, ಚರ್ಮದ ಕೋಶಗಳನ್ನು ಸೂರ್ಯನ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ದೇಹ ತಂಪಾಗಿರಲು ಸಹಕಾರಿಯಾಗುತ್ತದೆ. ವೈಯಕ್ತಿಕ ಸ್ವಚ್ಛತೆ ಜೊತೆಗೆ ಪರಿಸರ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಆರೋಗ್ಯ ಹೊಂದಬಹುದು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಬೇಸಿಗೆ ಸಮಯದಲ್ಲಿ ಬಿಗಿಯಾದ ಉಡುಪುಗಳನ್ನು ಧರಿಸದೆ ತೆಳುವಾದ ಕಾಟನ್ ಬಟ್ಟೆ ಧರಿಸಬೇಕು. ಆಗಿಂದಾಗೆ ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತಣ್ಣೀರಿನ ಸ್ನಾನ ಮಾಡುವುದರ ಜೊತೆಗೆ ಬೆಳಗಿನ ಸಮಯದಲ್ಲಿ ಕೆಲಸ ಕಾರ್ಯಗಳ ಕಡೆ ಗಮನಹರಿಸಬೇಕು. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಅನಾವಶ್ಯಕವಾಗಿ ಹೊರಗಡೆ ಓಡಾಡುವುದನ್ನು ತಪ್ಪಿಸುವುದು ಒಳಿತು, ಸುಡು ಬಿಸಿಲಿನಲ್ಲಿ ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದರೆ ದೇಹದ ಉಷ್ಣಾಂಶಕ್ಕಿಂತ ಹೆಚ್ಚಾಗಿ ಸುಸ್ತು, ನೀರಡಿಕೆ, ಕಾಣಿಸಿಕೊಳ್ಳಬಹುದು ಎಂದರು.

ಸೂರ್ಯನ ಶಾಖ ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ದೇಹದ ಬೆವರು ಹೆಚ್ಚಾಗಿ ದುರ್ವಾಸನೆ ಆಗಬಹುದು. ಚರ್ಮರೋಗಕ್ಕೆ ದಾರಿ ಮಾಡಿಕೊಡಬಹುದು ಮತ್ತು ಜೀರ್ಣಕ್ರಿಯೆಗೆ ಬಾಳೆಹಣ್ಣು ಸೇವನೆ ಮಾಡುತ್ತಾ ಗರ್ಭಿಣಿಯರು, ಮಕ್ಕಳು ಆಗಾಗ್ಗೆ ದ್ರವರೂಪದ ಆಹಾರ ಸ್ವೀಕರಿಸಬೇಕು. ಮಧ್ಯಾಹ್ನ 2 ತಾಸು ತಪ್ಪದೇ ಮಲಗುವುದು ಒಳ್ಳೆಯದು ಎಂದರು.

ವೈದ್ಯರಲ್ಲಿ ಸಕಾಲಕ್ಕೆ ಪರೀಕ್ಷೆ ಮತ್ತು ಚಿಕಿತ್ಸೆ ಪಡೆದು ಮಾನಸಿಕ ನೆಮ್ಮದಿಯಿಂದ ಆರೋಗ್ಯ ಕಾಪಾಡಬೇಕು. ಕಲುಷಿತ ನೀರು ಮತ್ತು ಕಲುಷಿತ ಆಹಾರದಿಂದ ಹರಡಬಹುದಾದ ರೋಗಗಳನ್ನು ತಡೆಯಲು ಸೂಕ್ತ ಮಾರ್ಗೋಪಾಯಗಳನ್ನು ಅನುಸರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಆರೋಗ್ಯ ನಿರೀಕ್ಷಣಾಧಿಕಾರಿ ಮಧುಸೂದನ್, ಸಮುದಾಯ ಆರೋಗ್ಯ ಅಧಿಕಾರಿ ಉಸ್ನ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಜೆ.ರಾಜೇಶ್ವರಿ, ಆಶಾ ಕಾರ್ಯಕರ್ತೆ ಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ತಿಮ್ಮಕ್ಕ ಸೇರಿದಂತೆ ಮತ್ತಿತರರು ಇದ್ದರು.