ಸಾರಾಂಶ
- ರೈತ ಸಂಘ, ರೈತ ಸೇನೆ ನೇತೃತ್ವದಲ್ಲಿ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲೂಕುಗಳ ರೈತರ ಪ್ರತಿಭಟನೆಯಲ್ಲಿ ಆಗ್ರಹ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ, ಚನ್ನಗಿರಿ ಹಾಗೂ ನ್ಯಾಮತಿ ತಾಲೂಕುಗಳ ವ್ಯಾಪ್ತಿ ಬಗರ್‌ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆ ವತಿಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಮೂರೂ ತಾಲೂಕುಗಳ ರೈತರು ಶುಕ್ರವಾರ ಹೊನ್ನಾಳಿ ಕನಕದಾಸ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ, ಎಸಿ ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿದರು.ಚನ್ನಗಿರಿ ತಾಲೂಕು ರೈತ ಸಂಘ- ಹಸಿರು ಸೇನೆ ಅಧ್ಯಕ್ಷ ಎಸ್.ಆರ್. ರವಿಕುಮಾರ್ ಮಾತನಾಡಿ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳ ವ್ಯಾಪ್ತಿಗೆ ಒಳಪಡುವ ಅರಣ್ಯ ಸಾಗುವಳಿದಾರರು 60-70 ವರ್ಷಗಳಿಂದ ಜಮೀನು ಉಳುಮೆ ಮಾಡಿ, ಜೀವನ ಸಾಗಿಸುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ನಮೂನೆ 50, 53 ಹಾಗೂ 57 ಅರ್ಜಿಗಳನ್ನು 1998-99ನೇ ಸಾಲಿನಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎಂದರು.
ಇತ್ತೀಚೆಗೆ ಸರ್ಕಾರ ಆದೇಶಿಸಿರುವಂತೆ 2015ಸೇ ಸಾಲಿಗಿಂತ ಹಿಂದೆ ಸಾಗುವಳಿ ಮಾಡಿರುವ ರೈತರ ಜಮೀನುಗಳನ್ನು ಯಾವುದೇ ಕಾರಣಕ್ಕೂ ಸಾಗುವಳಿಯಿಂದ ತೆರವುಗೊಳಿಸದಂತೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಿದ್ದರೂ, ಚನ್ನಗಿರಿ ತಾಲೂಕು ಸೇರಿದಂತೆ ಇತರೇ ತಾಲೂಕಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಅನಗತ್ಯವಾಗಿ ರೈತರಿಗೆ ನೋಟಿಸ್ ನೀಡುತ್ತಿದ್ದಾರೆ. ಅಮಾಯಕ, ಬಡ ರೈತರಿಗೆ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡಿ, ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ ಹಿನ್ನೆಲೆ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳ ಉಪವಿಭಾಗಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆ ಕರೆಯಬೇಕು. ರೈತರಿಗೆ ಕಿರುಕುಳ, ತೊಂದರೆಗಳ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಚನ್ನಗಿರಿ ತಾಲೂಕು ಶಿವಗಂಗಾನಾಳ್ ಗ್ರಾಮದ ಪಕ್ಕ ಜೋಗಿ ಜನಾಂಗದವರು ಸುಮಾರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಅವರಿಗೆ ಕೂಡಲೇ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಈ ಸಂದರ್ಭದಲ್ಲಿ ರವಿಕುಮಾರ್ ಅವರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಹೊನ್ನಾಳಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ನ್ಯಾಮತಿ ಅಧ್ಯಕ್ಷ ಲೋಕೇಶಪ್ಪ, ರೈತ ಮುಖಂಡರಾದ ಪೀರ್ಯಾ ನಾಯ್ಕ, ಮಧುರನಾಯಕನಹಳ್ಳಿ ಜಿ.ಕೆ. ಪ್ರಭಾಕರ್, ಹನುಮಂತಪ್ಪ, ಆಂಜನೇಯ, ಪ್ರಕಾಶ್, ಉಮೇಶ್, ಕುಮಾರ್, ಶರಣಮ್ಮ, ರಂಗನಾಥ್, ಧರಾಸೂರಪ್ಪ, ಶಿವಣ್ಣ, ಜ್ಞಾನೇಶ್ ಸೇರಿದಂತೆ ನೂರಾರು ರೈತರು ಮತ್ತು ರೈತ ಮಹಿಳೆಯರು ಇದ್ದರು.
- - -ಬಾಕ್ಸ್ * ಪ್ರತಿ ಸೋಮವಾರ ಸಭೆ ನಡೆಸಲು ಒತ್ತಾಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ಈ ಮೂರೂ ತಾಲೂಕುಗಳಲ್ಲಿ ಪ್ರತಿ ಸೋಮವಾರ ಇನ್ನು ಮುಂದೆ ಬಗರ್ ಹುಕುಂ ಮಂಜೂರಾತಿ ಸಭೆ ನಡೆಸಬೇಕು, ಚನ್ನಗಿರಿ ತಾಲೂಕು ವ್ಯಾಪ್ತಿ ಬಸವಾಪಟ್ಟಣ ಹೋಬಳಿಯ ಕಂಚುಗಾರ್ತಿ ಕಟ್ಟೆ ಗ್ರಾಮದಲ್ಲಿ ಈಗಾಗಲೇ 2.6 ಗುಂಟೆ ಜಮೀನನ್ನು ನಿವೇಶನಕ್ಕಾಗಿ ಈ ಹಿಂದೆಯೇ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ತಕ್ಷಣ ಗ್ರಾಮ ಪಂಚಾಯಿತಿಗೆ ಒಳಪಡಿಸಿ, ಸ್ಥಳೀಯ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿಸಬೇಕೆಂದು ರೈತರು ಎ.ಸಿ. ಅವರಿಗೆ ಆಗ್ರಹಿಸಿದರು. ಈಗಾಗಲೇ ಉಭಯ ತಾಲೂಕುಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಬಗರ್ ಹುಕುಂ ಸಾಗುವಳಿಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಅರ್ಜಿಗಳನ್ನು ವಿಲೇಪಡಿಸಬೇಕು. ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 5 ವರ್ಷಗಳಿಂದ ಸುಮಾರು 500ಕ್ಕೂ ಹೆಚ್ಚು ಅರ್ಜಿಗಳು ಕಚೇರಿಯಲ್ಲಿಯೇ ಧೂಳು ಹಿಡಿಯುತ್ತಿವೆ. ತಕ್ಷಣ ಇವುಗಳನ್ನು ಕೈಗೆತ್ತಿಕೊಂಡು ಕ್ರಮ ವಹಿಸಬೇಕು ಎಂದು ಒತ್ತಾಯಪಡಿಸಿದರು.
- - - -4ಎಚ್.ಎಲ್.ಐ1:ಹೊನ್ನಾಳಿ, ಚನ್ನಗಿರಿ ಹಾಗೂ ನ್ಯಾಮತಿ ತಾಲೂಕುಗಳ ವ್ಯಾಪ್ತಿ ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಮೂರೂ ತಾಲೂಕುಗಳ ರೈತರು ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಶುಕ್ರವಾರ ಹೊನ್ನಾಳಿಯಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.