ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ಬರೆಯುವುದನ್ನು ತಪ್ಪಿಸಲು ಸ್ಥಳೀಯವಾಗಿ ಉದ್ದಿಮೆಗಳು ಹೆಚ್ಚು ಸ್ಥಾಪನೆಯಾಬೇಕು. ಮಹಿಳೆಯರು ತಯಾರಿಸುವ ಅನೇಕ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲ. ಅಂತಹ ವಸ್ತುಗಳನ್ನು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದರು.ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನ, ಭಾರತ ಸರ್ಕಾರ ಆಹಾರ ಸಂಸ್ಕರಣಾ ಸಚಿವಾಲಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸಹಯೋಗದಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಮಾತನಾಡಿ, ಆತ್ಮನಿರ್ಭರ ಭಾರತ್ ಅಭಿಯಾನದಡಿ ಮೊದಲು ಒಂದು ಜಿಲ್ಲೆಗೆ ಒಂದು ಉತ್ಪನ್ನವಿತ್ತು. ಈಗ ಒಂದು ಜಿಲ್ಲೆಗೆ ಹಲವು ಉತ್ಪನ್ನಗಳು ಎನ್ನುವುದನ್ನು ಮಾಡಿದ ಮೇಲೆ ಸಾಕಷ್ಟು ಉದ್ದಿಮೆಗಳು ಪ್ರಾರಂಭವಾಗುತ್ತಿದೆ. ಯೋಜನೆ ಶುರುವಾದ ಐದು ವರ್ಷಗಳಲ್ಲಿ 131 ಜನರು ಉದ್ದಿಮೆದಾರರಾಗಿ ಹೊರ ಹೊಮ್ಮಿದ್ದಾರೆ. ಕಳೆದ ಹದಿನೈದು ದಿನಗಳಿಂದ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಿದ ಮೇಲೆ 102 ಜನರು ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರಿಗೂ ವಿವಿಧ ಬ್ಯಾಂಕ್‌ಗಳಲ್ಲಿ ಲಾಗಿನ್‌ಗೆ ಸೇರ್ಪಡೆ ಮಾಡಿ ಸಾಲ ಮಂಜೂರು ಮಾಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.102 ಅರ್ಜಿಗಳಲ್ಲಿ 22 ಹಿಟ್ಟಿನಗಿರಣಿ, 10 ತೆಂಗಿನ ಉತ್ಪನ್ನಗಳು, 9 ಸಿರಿಧಾನ್ಯ ಉತ್ಪನ್ನಗಳು, 6 ಎಣ್ಣೆಕಾಳುಗಳು, 10 ಬೇಕರಿ ಉತ್ಪನ್ನಗಳು, 2 ಮತ್ಸ್ಯ, 2 ಶುಂಠಿ, 2 ಬೆಲ್ಲ, 2 ಉಪ್ಪಿನಕಾಯಿ, 2 ಅಕ್ಕಿ ಉತ್ಪನ್ನಗಳ ಉದ್ದಿಮೆ ಸ್ಥಾಪನೆಯಾಗಲಿವೆ ಎಂದರು.
ಯಶಸ್ವಿ ಫಲಾನುಭವಿಗಳಾದ ಮೋಹನಕುಮಾರ್ ಸಿರಿಧಾನ್ಯ ಹಾಗೂ ಎಣ್ಣೆ ಬೀಜದ ಉತ್ಪನ್ನಗಳು, ಶೃತಿಗಿರಿಧರ್ ಅವರು ಬೆಲ್ಲ ಉತ್ಪಾದನಾ ಘಟಕ, ಪ್ರಮೀತ್ ಅವರು ನಿರ್ಜಿಲೀಕರಣ ಉತ್ಪನ್ನಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್. ಶಿವಪ್ರಕಾಶ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಳ್ಳಿ ಶಿವಕುಮಾರ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಪಿ. ಕೃಷ್ಣಮೂರ್ತಿ, ಕೃಷಿ ಅಧಿಕಾರಿ ವೆಂಕಟೇಶ್ ಇದ್ದರು.ರಾಜ್ಯ, ಕೇಂದ್ರ ಸರ್ಕಾರಗಳ ಸಬ್ಸಿಡಿ ಧನಸಹಾಯವನ್ನು ಬಳಸಿಕೊಂಡು ಉದ್ದಿಮೆಗಳನ್ನು ಸ್ಥಾಪಿಸಬೇಕು. ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳ ಆಧಾರದ ಮೇಲೆ ಸಂಸ್ಕರಣಾ ಉದ್ದಿಮೆ ಸ್ಥಾಪಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ದೊರೆಯುವ ಉತ್ಪನ್ನಗಳಿಗೆ ತಕ್ಕಂತೆ ಉದ್ದಿಮೆಗಳನ್ನು ಸ್ಥಾಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಬ್ಸಿಡಿ ನೀಡುತ್ತಿವೆ. ಈಗ ಶೇ. 50 ರಷ್ಟು 15 ಲಕ್ಷ ರೂ. ಸಬ್ಸಿಡಿ ಮತ್ತು 15 ಲಕ್ಷ ರೂ. ಬ್ಯಾಂಕ್ ಸಾಲವನ್ನು ಕೊಡಲಾಗುತ್ತದೆ. ಈ ಅನುದಾನದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿದರೆ ಮತ್ತಷ್ಟು ಜನರಿಗೆ ಉದ್ಯೋಗ ಕೊಡಬಹುದು.
- ಸಿ.ಎಸ್. ಶಿವಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ.