ಸಂವಿಧಾನ ಬದಲಾವಣೆ ಬಯಸುವವರ ದೂರವಿಡಿ: ಡಿ.ಮಂಜುನಾಥ

| Published : Feb 06 2024, 01:35 AM IST

ಸಾರಾಂಶ

ಸಂವಿಧಾನವಿಲ್ಲದಿದ್ದರೆ, ನಮ್ಮೆಲ್ಲರ ಬದುಕು ಅಸ್ಥಿರತೆಯ ಗೂಡಾಗುತ್ತಿತ್ತು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಕಾರ್ಯನಿರ್ವಹಿಸುವುದೇ ಸಂವಿಧಾನದ ಆಧಾರದ ಮೇಲೆ ಎಂದು ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಿ.ಮಂಜುನಾಥ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಂವಿಧಾನ ಉಳಿಸಿ ಜಾಗೃತಿ ಜಾಥಾ ಮೊಳಕಾಲ್ಮೂರು ತಾಲ್ಲೂಕು ಕಾರ್ಯಕ್ರಮ ಮುಗಿಸಿ ಸೋಮವಾರ ಮಧ್ಯಾಹ್ನ ಚಳ್ಳಕೆರೆ ನಗರಕ್ಕೆ ಆಗಮಿಸಿತು. ನಗರದ ಶ್ರೀಚಳ್ಳಕೆರೆಯಮ್ಮ ದೇವಸ್ಥಾನದಿಂದ ಮೆರಣಿಗೆ ಮೂಲಕ ನೆಹರೂ, ಅಂಬೇಡ್ಕರ್, ವಾಲ್ಮೀಕಿ ವೃತ್ತದ ಮೂಲಕ ನಗರಸಭೆಯ ಆವರಣಕ್ಕೆ ಜಾಗೃತಿ ಜಾಥಾ ಆಗಮಿಸಿದ ನಂತರ ಸಾರ್ವಜನಿಕರ ಸಭೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು.

ಸಂವಿಧಾನ ಉಳಿಸಿ ಜಾಗೃತಿಜಾಥಾ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಎಸ್.ಕೆ.ಪೋತಿ, ನಾವು ನಮ್ಮ ಸಂವಿಧಾನವನ್ನು ಒಪ್ಪಿ ೭೫ ವರ್ಷ ಗಳು ಕಳೆದಿದ್ದು, ಇಂದಿಗೂ ಸಹ ನಮ್ಮ ಎಲ್ಲಾ ಆಡಳಿತದ ಸಂವಿಧಾನದ ಮೂಲಕವೇ ನಡೆಯುತ್ತಿದೆ. ಆದರೆ, ಇತ್ತೀಚೆಗೆ ಕೆಲವು ಶಕ್ತಿಗಳು ಸಂವಿಧಾನವನ್ನು ಬದ ಲಾಯಿಸುವ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂವಿಧಾನ ಉಳಿಸಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಉಪನ್ಯಾಸಕ ಅರುಣ್‌ ಜೋಳದ ಕೂಡ್ಲಿಗಿ ಭಾರತದ ಸಂವಿಧಾನ ವಿಶ್ವಮನ್ನಣೆ ಪಡೆದಿದೆ. ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಮತ್ತು ತಂಡ ಸಂವಿಧಾನ ರಚಿಸುವ ಸಂದರ್ಭದಲ್ಲಿ ದೇಶದ ಹಿತ, ಭದ್ರತೆ, ಜನಕಲ್ಯಾಣ ಸೇರಿದಂತೆ ಹಲವಾರು ವಿಷಯಗಳ ಮಾನದಂಡದಲ್ಲಿ ಸಂವಿಧಾನ ರಚಿಸಲಾಗಿದೆ. ದೇಶದ ನೂರಾರು ಜಾತಿ, ಧರ್ಮಗಳಲ್ಲಿ ಸಮನ್ವಯತೆಯನ್ನು ಕಾಣಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ. ಸಂವಿಧಾನ ಇಂದು ಸಮಾಜದ ಎಲ್ಲರ ಮನದಲ್ಲಿ ಆಳವಾಗಿ ಬೇರೂರಿದೆ. ಇಂತಹ ಸಂವಿಧಾನವನ್ನು ಬದಲಾವಣೆ ಮಾಡುವ ಬಗ್ಗೆ ಚರ್ಚಿಸುವ ದುಷ್ಟಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಿ.ಮಂಜುನಾಥ ಮಾತನಾಡಿ, ಸಂವಿಧಾನ ಜಾಗೃತಿಜಾಥಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಸಂವಿಧಾನ ನಮಗೆ ಎಲ್ಲವನ್ನೂ ನೀಡಿದೆ. ಸಂವಿಧಾನವಿಲ್ಲದಿದ್ದರೆ, ನಮ್ಮೆಲ್ಲರ ಬದುಕು ಅಸ್ಥಿರತೆಯ ಗೂಡಾಗುತ್ತಿತ್ತು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಕಾರ್ಯನಿರ್ವಹಿಸುವುದೇ ಸಂವಿಧಾನದ ಆಧಾರದ ಮೇಲೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್‌ ಪಾಷ, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಪೌರಾಯುಕ್ತ ಚಂದ್ರಪ್ಪ, ಬಿಇಒ ಕೆ.ಎಸ್.ಸುರೇಶ್, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಉಪಾಧ್ಯಕ್ಷ ಪಾಲಯ್ಯ, ಕಾರ್ಯದರ್ಶಿ ಸಿದ್ಧರಾಜು, ಆನಂದಮೂರ್ತಿ, ಡಿ.ಒ.ಭಾಸ್ಕರ್, ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ಮಾಜಿ ಉಪಾಧ್ಯಕ್ಷ ಟಿ.ವಿಜಯಕುಮಾರ್, ಚಂದ್ರು, ಮೈತ್ರಿದ್ಯಾಮಣ್ಣ, ಉಮೇಶ್‌ಚಂದ್ರ ಬ್ಯಾನರ್ಜಿ, ಭೀಮನಕೆರೆ ಶಿವಮೂರ್ತಿ, ಚನ್ನಿಗರಾಯ ಮುಂತಾದವರು ಉಪಸ್ಥಿತರಿದ್ದರು.