ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ನೀರು ನಿಲ್ಲದಂತೆ ನಿಗಾ ವಹಿಸಿ: ಸತೀಶ ಹೆಗಡೆ

| Published : Nov 21 2024, 01:00 AM IST

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ನೀರು ನಿಲ್ಲದಂತೆ ನಿಗಾ ವಹಿಸಿ: ಸತೀಶ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಎಲೆಚುಕ್ಕಿ ರೋಗ ನಿಯಂತ್ರಿಸಲು ತೋಟದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಶಿಫಾರಸು ಮಾಡಿದ ಪ್ರಮಾಣದಲ್ಲಿ ಗೊಬ್ಬರ ವಿತರಿಸಬೇಕು.

ಶಿರಸಿ: ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗದ ಕಾರಣ ಎಲೆಚುಕ್ಕಿ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ಈವರೆಗೆ ೬,೧೨೬ ಹೆಕ್ಟೇರ್ ಪ್ರದೇಶದಲ್ಲಿ ರೋಗ ತೀವ್ರವಾಗಿದೆ. ಈ ಬಾರಿ ಕೊಳೆ ರೋಗವೂ ವಿಪರೀತ ಬಂದ ಕಾರಣ ಅಡಕೆಯ ಸುಳಿಗಳು ಕೊಳೆಯುವ ಸಾಧ್ಯತೆ ಹೆಚ್ಚಿದೆ. ಬೆಳೆಗಾರರು ಔಷಧಿ ಸಿಂಪಣೆ ಮಾಡುವ ಮೂಲಕ ನಿಯಂತ್ರಣಕ್ಕೆ ತರಲು ಪ್ರಯತ್ನಿಸಬೇಕು ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ತಿಳಿಸಿದರು.ಬುಧವಾರ ನಗರದ ತಾಪಂನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದರು.ಎಲೆಚುಕ್ಕಿ ರೋಗ ನಿಯಂತ್ರಿಸಲು ತೋಟದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಶಿಫಾರಸು ಮಾಡಿದ ಪ್ರಮಾಣದಲ್ಲಿ ಗೊಬ್ಬರ ವಿತರಿಸಬೇಕು. ರೋಗಪೀಡಿತ ಎಲೆಗಳನ್ನು ತೋಟದಿಂದ ತೆಗೆದು ಸುಡಬೇಕು. ಪ್ರಸಕ್ತ ವರ್ಷದಿಂದ ಹನಿ ನೀರಾವರಿಗೆ ಶೇ. ೯೦ರ ಸಹಾಯಧನ ಲಭ್ಯವಿದೆ. ಎಲ್ಲ ರೈತರು ಪ್ರಯೋಜನ ಪಡೆಯಬೇಕು ಎಂದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮಾತನಾಡಿ, ಅಕ್ಟೋಬರ್‌ನಲ್ಲಿ ಅಕಾಲಿಕ ಮಳೆಗೆ ಕಟಾವಿಗೆ ಬಂದ ಬೆಳೆ ಹಾನಿಯಾಗಿತ್ತು. ೧೧೩ ಹೆಕ್ಟೇರ್ ಪ್ರದೇಶದ ಹಾನಿಯ ವರದಿ ನೀಡಲಾಗಿದೆ. ೯೯.೪೫ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ಕೃಷಿ ಭಾಗ್ಯ ಯೋಜನೆ ಮತ್ತೆ ಮಂಜೂರಾಗಿದ್ದು, ಶೇ. ೯೦ರ ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದು. ಅತಿವೃಷ್ಟಿಯಿಂದ ೧೭೧ ಹೆಕ್ಟೇರ್ ಹಾನಿ ಪರಿಹಾರ ಮಂಜೂರಾಗಿದೆ ಎಂದರು.ಆರೋಗ್ಯ ಇಲಾಖೆಯ ಕುರಿತು ಡಾ. ಸೌಮ್ಯ ಎಸ್.ಪಿ. ಮಾಹಿತಿ ನೀಡಿ, ತಾಲೂಕಿನ ವಿವಿಧೆಡೆ ೧೧ ಆರೋಗ್ಯಾಧಿಕಾರಿಗಳು ಬೇಕು. ಆದರೆ ಮೂರು ಜನ ಕಾಯಂ ಹಾಗೂ ಇಬ್ಬರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದೆಡೆ ಖಾಲಿಯಿದೆ. ಪ್ರಸ್ತುತ ವಾತಾವರಣದ ಕಾರಣಕ್ಕೆ ಜ್ವರಪೀಡಿತರ ಸಂಖ್ಯೆ ಹೆಚ್ಚುತ್ತಿದೆ ಎಂದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಇಲಾಖೆ ಪ್ರಗತಿ ವರದಿ ತಿಳಿಸಿದರು. ಶಾಂತಿ ಸಂದೇಶ ನೀಡುವ ಭಿತ್ತಿಚಿತ್ರ ಸ್ಪರ್ಧೆ

ಸಿದ್ದಾಪುರ: ಸ್ಥಳೀಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಜಾಗತಿಕ ಶಾಂತಿ ಸಂದೇಶ ನೀಡುವ ಭಿತ್ತಿಚಿತ್ರ ಸ್ಪರ್ಧೆ ಶಾಲಾ ಮಕ್ಕಳಿಗೆ ನಡೆಸಲಾಯಿತು. ವಿವಿಧ ಶಾಲೆಗಳ ೩೦ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಲಯನ್ಸ್ ಮಾಜಿ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ ಅವರು, ಪರಿಸರ ಅಂದರೆ ನಮ್ಮ ಬದುಕಿನ ಆಸರೆ. ಅದನ್ನು ಸರಿಯಾಗಿ ಇಟ್ಟುಕೊಂಡಲ್ಲಿ ಮಾತ್ರ ಜಾಗತಿಕ ಶಾಂತಿ ನೆಮ್ಮದಿ ಸಿಗಲು ಸಾಧ್ಯ ಎಂದರು.

ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಎ.ಜಿ. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಜೋನ್ ಚೇರ್ ಪರ್ಸನ್ ಲಯನ್ ಶ್ಯಾಮಲಾ ಹೆಗಡೆ, ಜಿಲ್ಲಾ ಚೇರ್ಮನ್ ಲಯನ್ ಸತೀಶ್ ಗೌಡರ್, ಕಾರ್ಯದರ್ಶಿ ಲಯನ್ ಕುಮಾರ್ ಗೌಡರ, ಖಜಾಂಚಿ ಲಯನ್ ಆಕಾಶ್ ಹೆಗಡೆ, ಉಪಾಧ್ಯಕ್ಷ ಲಯನ್ ಎಂ.ಆರ್. ಪಾಟೀಲ್ ಉಪಸ್ಥಿತರಿದ್ದರು.