ಬಳ್ಳಾರಿ: ವಿದ್ಯಾರ್ಥಿಗಳಲ್ಲಿನ ಪ್ರಜ್ಞೆ ಎಚ್ಚರಗೊಳ್ಳಬೇಕು. ದೊಡ್ಡ ದೊಡ್ಡ ಕನಸು ಕಂಡು ನನಸಾಗಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ, ಹಿರಿಯ ಸಮಾಜಮುಖಿ ಚಿಂತಕ ಡಾ.ಕರಿಯಪ್ಪ ಮಾಳಗಿ ತಿಳಿಸಿದರು.

ಜೆಟಿ ಫೌಂಡೇಶನ್‌ನಿಂದ ನಗರದ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿ (ಗರ್ಲ್ಸ್‌ ಹೈಸ್ಕೂಲ್‌) ಜರುಗಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿಮ್ಮ ನನಸಾಗಿಸಲು ಬೇರೆ ಯಾವ ಮಾರ್ಗಗಳು ಇಲ್ಲ. ನಿರಂತರ ಅಧ್ಯಯನ ಮಾತ್ರ ನಿಮ್ಮ ಬದುಕನ್ನು ಹಸನು ಮಾಡಲು ಸಾಧ್ಯ. ದೊಡ್ಡ ಹುದ್ದೆಗಳನ್ನು ಪಡೆದು ಸಮಾಜದಲ್ಲಿ ದೊಡ್ಡ ಗೌರವ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಸಾಧ್ಯ. ಶಿಕ್ಷಣದ ಹೊರತಾಗಿ ಬದುಕು ರೂಪಿಸಿಕೊಳ್ಳಲು ಬೇರಾವ ಪರ್ಯಾಯ ಮಾರ್ಗಗಳಿಲ್ಲ. ಮಹಿಳೆಯರ ಸಬಲೀಕರಣಕ್ಕೂ ಶಿಕ್ಷಣವೇ ಮೂಲಾಧಾರವಾಗಿದೆ. ಶಿಕ್ಷಣ ಪಡೆದ ಮಹಿಳೆ ತನ್ನ ಜೀವನವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿಯ ಬೆಳವಣಿಗೆ ಶಿಕ್ಷಣದ ಮೂಲಕವೇ ಸಾಧ್ಯ ಎಂದು ತಿಳಿಸಿದರು.

ಹಿರಿಯ ಮಹಿಳಾ ಸಂಘಟಕಿ ಕಮಲಾ ಮರಿಸ್ವಾಮಿ, ಪುಷ್ಪಲತಾ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿನಿಯರು ಮೊಬೈಲ್‌ನಿಂದ ದೂರ ಇರಿ. ಮೊಬೈಲ್ ನಿಮಗೆ ದೊಡ್ಡ ಶತ್ರು ಎಂಬುದನ್ನು ಮರೆಯದಿರಿ. ಉನ್ನತ ಶಿಕ್ಷಣ ಪಡೆದುಕೊಳ್ಳಲು ಎಸ್ಸೆಸ್ಸೆಲ್ಸಿ ಪರೀಕ್ಷೆ ಹೆಚ್ಚು ಪ್ರಮುಖವಾಗುತ್ತದೆ. ಹೆಚ್ಚುತ್ತಿರುವ ಪೈಪೋಟಿಗಳ ನಡುವೆ ಸರ್ಕಾರಿ ಶಾಲೆಯ ಬಾಲಕಿಯರು ಉತ್ತಮ ಅಂಕಗಳನ್ನು ಪಡೆಯಬೇಕು. ಖಾಸಗಿ ಶಾಲೆ ವಿದ್ಯಾರ್ಥಿಗಳ ಮೀರಿ ಬೆಳೆಯಬೇಕು ಎಂದು ಆಶಿಸಿದರು.

ಜೆಟಿ ಫೌಂಡೇಶನ್‌ನ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ನೆಪದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸುವುದು. ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಆಶಯ ನಮ್ಮದಾಗಿದೆ ಎಂದರು.


ಚಿತ್ರದುರ್ಗ ಕಲಾ ಕಾಲೇಜಿನ ಸಮಾಜಶಾಸ್ತ್ರ ಅಧ್ಯಾಪಕ ಪ್ರೊ.ನಯಾಜ್ ಅಹ್ಮದ್, ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಾಪಕ ಪ್ರಶಾಂತ್ ನಾಯಕ್, ಲೇಖಕಿ ಡಾ.ಸಿದ್ದೇಶ್ವರಿ, ಭೀಮೇಶ ಸ್ವಾಮಿ, ಹಿರಿಯ ಪತ್ರಕರ್ತ ಮಂಜುನಾಥ ಕೆ.ಎಂ., ಉದ್ಯಮಿ ಚಂದ್ರಶೇಖರ ಜೋಳದರಾಶಿ, ಮನೋಜ್, ಪ್ರಸಾದ್ ಬಳ್ಳಾರಿ, ಬಸವರಾಜ್, ಪೋತಪ್ಪ ಜೋಳದರಾಶಿ, ದೇವರಾಜ್ ಬ್ಯಾಲಚಿಂತೆ ಮತ್ತಿತರರಿದ್ದರು. ಶಾಲೆಯ ಕನ್ನಡ ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.