ಕೆ.ವೈ. ಕಂದಕೂರ್ ದತ್ತಿ ಚುಟುಕು ಮಾಣಿಕ್ಯ ಪ್ರಶಸ್ತಿಗೆ ಗಂಗಾವತಿಯ ಇಸ್ಲಾಂಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ಶರಣಪ್ಪ ಹಕ್ಕಂಡಿ (ಅಳವಂಡಿ) ಅವರ ಮಿಣುಕು ದೀಪಗಳು ಕೃತಿ ಆಯ್ಕೆಯಾಗಿದೆ.

ಗಂಗಾವತಿ: ಕೆ.ವೈ. ಕಂದಕೂರ್ ದತ್ತಿ ಚುಟುಕು ಮಾಣಿಕ್ಯ ಪ್ರಶಸ್ತಿಗೆ ಗಂಗಾವತಿಯ ಇಸ್ಲಾಂಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ಶರಣಪ್ಪ ಹಕ್ಕಂಡಿ (ಅಳವಂಡಿ) ಅವರ ಮಿಣುಕು ದೀಪಗಳು ಕೃತಿ ಆಯ್ಕೆಯಾಗಿದೆ.

ಹಾಸನದ ಮಾಣಿಕ್ಯ ಪ್ರಕಾಶನ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಪ್ರತಿವರ್ಷ ಪ್ರಶಸ್ತಿ ನೀಡುತ್ತಿದ್ದು, ನಗದು ಬಹುಮಾನ ಮತ್ತು ಸ್ಮರಣಿಕೆ ಒಳಗೊಂಡಿದೆ. ಅ. 11ರಂದು ಹಾಸನದ ಸಂಸ್ಕೃತ ಭವನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕವಿ ಕಾವ್ಯ ಸಂಭ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಪ್ರಕಾಶನದ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.

ಜಯಶ್ರೀ ಹಕ್ಕಂಡಿ ಅವರು ಕನ್ನಡ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಕೆ-ಸೆಟ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಪ್ರೌಢಶಾಲಾ ಶಿಕ್ಷಕಿ (ಕನ್ನಡ ಪಂಡಿತರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕಥೆ, ಕವನ, ಚುಟುಕು ಲೇಖನಗಳನ್ನು ಬರೆಯುವುದು. ಸ್ಫೂರ್ತಿದಾಯಕ ಭಾಷಣಗಳನ್ನು ಕೇಳುವುದು. ಉಪನ್ಯಾಸ ನೀಡುವುದು, ಇಲಾಖೆ ವತಿಯಿಂದ ನಡೆಯುವ ಕಾರ್ಯಕ್ರಮಗಳನ್ನು ಮತ್ತು ವಿವಿಧ ಕಾರ್ಯಕ್ರಮಗಳನ್ನು ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ವಲಯ, ತಾಲೂಕು ಮತ್ತು ಜಿಲ್ಲಾ ಮಟ್ಟದ ಇಲಾಖೆ ಕೊಡಮಾಡುವ ಉತ್ತಮ ಶಿಕ್ಷಕ ಪ್ರಶಸ್ತಿ, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ, ಅಕ್ಷರನಾದ ಬಸವ ಶ್ರೀ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಪಡೆದಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಇವರ ಅವಿರತ ಶ್ರಮ ಇದ್ದು, ಇವರು ಬರೆದ ಉಲಿದಷ್ಟೇ ದನಿ (ಕವನ ಸಂಕಲನ,) ಮಿಣುಕು ದೀಪಗಳು (ಚುಟುಕು ಸಂಕಲನ) ಹೆಸರು ಗಳಿಸಿವೆ. “ಉಲಿದಷ್ಟೇ ದನಿ” ಕವನ ಸಂಕಲನಕ್ಕೆ ಕೊಪ್ಪಳ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಮರಿಗೌಡ ಮಲ್ಲನಗೌಡರ ಹೆಸರಿನಲ್ಲಿ ಡಾ. ಮಹಾಂತೇಶ ಮಲ್ಲನಗೌಡರ ನೀಡುವ ಜಿಲ್ಲಾ ದತ್ತಿ ಪ್ರಶಸ್ತಿ ಲಭಿಸಿದೆ. ಮಿಣುಕು ದೀಪಗಳು ಕೃತಿಗೆ ಕೆ.ವೈ. ಕಂದಕೂರ್ ದತ್ತಿ ಚುಟುಕು ಮಾಣಿಕ್ಯ ಪ್ರಶಸ್ತಿ ಲಭಿಸಿದೆ.

ಗಂಗಾವತಿ ತಾಲೂಕಿನ ವಿವಿಧ ಶಾಲೆಗಳಿಗೆ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವ ವಿಧಾನವನ್ನು ಮತ್ತು ಪರೀಕ್ಷಾ ಭಯ ಹೋಗಲಾಡಿಸಲು ಉಚಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಪ್ರತಿವರ್ಷ ಎರಡು ಮೂರು ವಿದ್ಯಾರ್ಥಿಗಳು ತೆಗೆದುಕೊಳ್ಳುವ ಹಾಗೆ ಮಾರ್ಗದರ್ಶನ ನೀಡಿದ ಕೀರ್ತಿ ಜಯಶ್ರೀ ಹಕ್ಕಂಡಿಗೆ ಸಲ್ಲುತ್ತದೆ.

ಕಾರಟಗಿ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ, ಕಾರ್ಯದರ್ಶಿಯಾಗಿ, ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಗಂಗಾವತಿ ತಾಲೂಕು ಘಟಕದ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಅವರ ಸೇವೆಯನ್ನು ಪರಿಗಣಿಸಿ ವಿವಿಧ ಮಠಾಧೀಶರು ಸೇರಿದಂತೆ, ವಿವಿಧ ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು ಗೌರವಿಸಿವೆ.