ಸಾರಾಂಶ
10 ಜನರಿಗೆ ಗೌರವ ಪ್ರಶಸ್ತಿ, 10 ಜನರಿಗೆ ಶಿಲ್ಪಶ್ರೀ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2022, 2023 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2023 ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ 18ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ, ಬಹುಮಾನ ವಿತರಣಾ ಸಮಾರಂಭ ಜ.17 ರಂದು ಸಂಜೆ 5 ಗಂಟೆಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಗೌರವ ಪ್ರಶಸ್ತಿ ಪ್ರದಾನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ನೆರವೇರಿಸಲಿದ್ದು, ಶಿಲ್ಪಶ್ರೀ ಪ್ರಶಸ್ತಿ ಹಾಗೂ ವಾರ್ಷಿಕ ಶಿಲ್ಪಕಲಾ ಬಹುಮಾನ ವಿತರಣೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ನೀಡಲಿದ್ದಾರೆ ಎಂದರು.ಈ ಕಾರ್ಯಕ್ರಮದಲ್ಲಿ 10 ಜನ ಸಾಧಕರಿಗೆ ಗೌರವ ಪ್ರಶಸ್ತಿ, 2023 ನೇ ಸಾಲಿನ 10 ಜನರಿಗೆ ಶಿಲ್ಪಶ್ರೀ ಪ್ರಶಸ್ತಿ ಹಾಗೂ 18ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನವನ್ನು 8 ಜನರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಲಲಿತಕಲಾ ಅಕಾಡೆಮಿಯಿಂದ ಪ್ರತ್ಯೇಕಗೊಂಡು ಸ್ಥಾಪನೆಯಾದ ಶಿಲ್ಪಕಲಾ ಅಕಾಡೆಮಿ ಈವರೆಗೆ ರಾಜ್ಯದಲ್ಲಿ ಸಾಂಪ್ರದಾಯಿಕ ಶಿಲ್ಪಕಲಾ ಪರಂಪರೆ ಹಾಗೂ ಸಮಕಾಲೀನ ಶಿಲ್ಪಕಲಾ ಪ್ರಕಾರಗಳ ಬೆಳವಣಿಗೆಗೆ ಶ್ರಮಿಸುತ್ತಿದ್ದು, ನಶಿಸು ತ್ತಿರುವ ಶಿಲ್ಪಕಲಾ ಶೈಲಿಗಳನ್ನು ಗುರುತಿಸಿ ಅನೇಕ ಪ್ರಗತಿಪರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶಿಲ್ಪಕಲಾ ಬೆಳವಣಿಗೆಗೆ ಕಂಕಣಬದ್ಧವಾಗಿದೆ ಎಂದು ತಿಳಿಸಿದರು.ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಲ್ಲು, ಮರ, ಲೋಹ, ಸಿಮೆಂಟ್, ಫೈಬರ್, ಮಿಶ್ರ ಮಾಧ್ಯಮದೊಂದಿಗೆ ವಿವಿಧ ಮಾಧ್ಯಮಗಳ ಶಿಲ್ಪ ಶಿಬಿರಗಳನ್ನು ಆಯೋಜಿಸಲಾಗಿದೆ. ಶಿಲ್ಪಕಲೆಗೆ ಸಂಬಂಧಿಸಿದ ವಿಚಾರ ಸಂಕಿರಣ, ಕಮ್ಮಟ, ಕಾರ್ಯಾಗಾರ, ರಸಪ್ರಶ್ನೆ ಶಿಬಿರ, ಶಿಲ್ಪಕಲೆಗೆ-ಶಿಲ್ಪಿಗಳಿಗೆ ಸಂಬಂಧಿಸಿದ ಪುಸ್ತಕ/ಗ್ರಂಥಗಳನ್ನು ಪ್ರಕಟಿಸಲಾಗಿದೆ ಎಂದರು.
ಶಿಲ್ಪಕಲಾ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವ ಸಾಮಾನ್ಯ, ಪ.ಜಾ, ಪ.ಪಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಫೆಲೋಶಿಪ್ ನೀಡುವುದು, ಹೊರ ರಾಜ್ಯಗಳಲ್ಲಿ ಶಿಲ್ಪಕಲೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಕಾರ್ಯಚಟುವಟಿಕೆಗೆ ಚುರುಕುನೀಡಿದೆ ಎಂದರು.ಗೌರವ ಪ್ರಶಸ್ತಿಗೆ ಆಯ್ಕೆಯಾದ 5 ಮಂದಿಗೆ ತಲಾ ₹50 ಸಾವಿರ ನಗದು, ಶಿಲ್ಪಶ್ರೀ ಪ್ರಶಸ್ತಿಗೆ ಭಾಜನರಾದ 10 ಮಂದಿಗೆ ತಲಾ ₹25 ಸಾವಿರ, ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ, 6 ಮಂದಿಗೆ ತಲಾ 25 ಸಾವಿರದಂತೆ ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ದತ್ತಿ ಬಹುಮಾನ, 3 ಮಂದಿಗೆ ತಲಾ ₹25 ಸಾವಿರ ದಂತೆ ವಿವಿಧ ಸಂಸ್ಥೆಗಳು ದತ್ತಿ ಬಹುಮಾನ ನೀಡುತ್ತಿವೆ ಎಂದರು.
ಅಕಾಡೆಮಿಯಿಂದ ಈವರೆಗೆ 140 ಹಿರಿಯ ಶಿಲ್ಪ ಕಲಾವಿದರಿಗೆ ಗೌರವ ಪ್ರಶಸ್ತಿ, 135 ಯುವ ಶಿಲ್ಪ ಕಲಾವಿದರನ್ನು ಗುರುತಿಸಿ ಬಹುಮಾನ ನೀಡಲಾಗಿದೆ. ಅಕಾಡೆಮಿ ಬೆಳ್ಳಿ ಹಬ್ಬದ ಅಂಗವಾಗಿ ಸರ್ಕಾರದಿಂದ ವಿಶೇಷವಾಗಿ ಪ್ರತೀ ವರ್ಷ ಶಿಲ್ಪಶ್ರೀ ಹೆಸರಿ ನಲ್ಲಿ ಪ್ರಶಸ್ತಿ ನೀಡಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಪ್ರಥಮ ವರ್ಷ ಈ ಪ್ರಶಸ್ತಿಯನ್ನು 10 ಮಂದಿಗೆ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.ಒಟ್ಟಾರೆ ಇಡೀ ಶಿಲ್ಪಕಲೆ ಸಮಾಗಮ ಎಲ್ಲಾ ರೀತಿಯ ಶಿಲ್ಪಕಲೆಗಳ ಪ್ರದರ್ಶನ ಜಿಲ್ಲೆಯ ಕೇಂದ್ರದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದ ಅವರು, ಶಿಲ್ಪಕಲೆಯಲ್ಲಿ ಮಕ್ಕಳಲ್ಲೂ ಆಸಕ್ತಿ ಮೂಡಿಸಲು ವಿನೂತನ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ವಿಜೇತರಾದವರಿಗೆ ಇದೇ ವೇದಿಕೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ವಿಶ್ವಕರ್ಮ ಆಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್, ಪೂರ್ವಿ ಸುಗಮ ಸಂಗೀತ ಗಂಗಾ ಗಾಯಕ ಎಂ.ಎಸ್. ಸುಧೀರ್, ಶಿಕ್ಷಕರ ಸಂಘದ ಸತ್ಯಪ್ರಕಾಶ್ ಉಪಸ್ಥಿತರಿದ್ದರು.15 ಕೆಸಿಕೆಎಂ 5ಚಿಕ್ಕಮಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ ಮಾತನಾಡಿದರು. ವಿಶ್ವಕರ್ಮ ಆಚಾರ್ಯ, ಡಾ. ಸಿ. ರಮೇಶ್, ಸತ್ಯಪ್ರಕಾಶ್ ಇದ್ದರು.