ಸಾರಾಂಶ
ಕಾರ್ಯಕ್ರಮದಲ್ಲಿ ಕೊಚ್ಚಿ, ಗೋವಾ, ಮುಂಬೈ, ಕಾಸರಗೋಡಿನ ರಂಗ ತಂಡಗಳ ಒಟ್ಟು ನಾಲ್ಕು ರಂಗಪ್ರದರ್ಶನಗಳು, ಕೊಂಕಣಿ ಗೀತೆಗಳ ನಾಟಕೋತ್ಸವ ಜರುಗಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಉದ್ಯಮ, ಸೇವೆ, ಕಲೆ. ರಂಗಭೂಮಿ ಎಲ್ಲ ರಂಗಗಳಲ್ಲಿಯೂ ಕೊಂಕಣಿಗರ ಕೊಡುಗೆಯಿದೆ. ಹಿಂದು, ಮುಸ್ಲಿಂ, ಕ್ರೈಸ್ತರನ್ನೂ ಒಗ್ಗೂಡಿಸಿರುವ ಕೊಂಕಣಿ ಭಾಷೆ ಇಂದು ಜಾಗತಿಕವಾಗಿ ವಿಸ್ತರಿಸಿದ್ದು ರಾಷ್ಟ್ರ ಮತ್ತು ಸಮಾಜಕ್ಕೆ ಅವರ ಕೊಡುಗೆ ಗಮನಾರ್ಹವಾಗಿದೆ. ಭಾಷೆಯ ಸೂತ್ರದಲ್ಲಿ ಕೊಂಕಣಿಗರ ಏಕತೆಯಿಂದ ಉಜ್ವಲ ಭವಿಷ್ಯವಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ.ಜಯರಾಜ್ ಅಮೀನ್ ಹೇಳಿದರು.ಅವರು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಜರಗಿದ ಎರಡು ದಿನಗಳ ವಿಶ್ವ ಕೊಂಕಣಿ ಸಮಾರೋಹ, ಪ್ರಶಸ್ತಿ ಪ್ರದಾನ 2023, ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವಿಶ್ವ ಕೊಂಕಣಿ ಪ್ರಶಸ್ತಿಪ್ರದಾನ: ವಿವಿಧ ರಂಗಗಳಲ್ಲಿನ ಕೊಂಕಣಿ ಭಾಷಾ ಸಾಧಕರಿಗೆ 2023ರ ಸಾಲಿನ ವಿಶ್ವ ಕೊಂಕಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಮಲಾ ವಿ.ಪೈ ಕೊಂಕಣಿ ಜೀವನ ಸಿದ್ಧಿ ಸಮ್ಮಾನ (ರಮಾನಂದ ರಾಯ್ಕರ್) ಕವಿತಾ ಕೃತಿ ಪುರಸ್ಕಾರ (ಆರ್.ಎಸ್. ಭಾಸ್ಕರ್), ಸಾಹಿತ್ಯ ಪುರಸ್ಕಾರ (ಪ್ರಕಾಶ್ ಪರ್ಯೇಂಕರ್) ಬಸ್ತಿ ವಾಮನ ಶೆಣೈ ಸೇವಾ ಪುರಸ್ಕಾರ ( ಶ್ರೀಮತಿ ಶಕುಂತಲಾ ಅಜಿತ್ ಭಂಡಾರ್ಕರ್ , ಜೋಸೆಫ್ ಕ್ರಾಸ್ತಾ) ಡಾ.ಪಿ.ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರ ( ಕಾಸರಗೋಡು ಚಿನ್ನಾ ) ಅನುವಾದ ಪುರಸ್ಕಾರ ( ರಮೇಶ್ ಲಾಡ್) ಪ್ರದಾನ ಮಾಡಲಾಯಿತು. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ನಂದಗೊಪಾಲ ಶೆಣೈ, ಕೊಂಕಣಿ ಭಾಷಿಗರ ಜಾಗತಿಕ ವ್ಯಾಪ್ತಿಯ ಚಿಂತನೆ, ಸಾಧನೆಗಳನ್ನು ಸರಿಯಾದ ಸ್ಫೂರ್ತಿ ಮತ್ತು ಮಾರ್ಗದರ್ಶನದೊಂದಿಗೆ ಮುನ್ನಡೆಸಲು ಹಲವು ಹೂವುಗಳ ಮಾಲೆಗೆ ಪೋಣಿಸುವ ದಾರವಾಗುವುದರಲ್ಲಿ ವಿಶ್ವ ಕೊಂಕಣಿ ಕೇಂದ್ರ ಧನ್ಯತೆ ಕಾಣುತ್ತಿದೆ ಎಂದರು.ಉದ್ಯಮಿ ಡಾ.ಪಿ.ದಯಾನಂದ ಪೈ, ಟಿ.ವಿ. ಮೋಹನ್ ದಾಸ್ ಪೈ ಆನ್ ಲೈನ್ ಸಂದೇಶ ನೀಡಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜಾ, ಡಾ. ಕಿರಣ್ ಬುಡ್ಕುಳೆ, ಕೋಶಾಧಿಕಾರಿ ಬಿ.ಆರ್. ಭಟ್, ಟ್ರಸ್ಟಿಗಳಾದ ಡಾ. ಕೆ. ಮೋಹನ್ ಪೈ, ರಮೆಶ್ ಡಿ ನಾಯಕ್, ವತಿಕಾ ಪೈ, ಪಯ್ಯನೂರು ರಮೆಶ್ ಪೈ, ವಿಲಿಯಮ ಡಿಸೊಜಾ, ಮೆಲ್ವಿನ್ ರೋಡ್ರಿಗಸ್, ವಾಲ್ಟರ್ ಡಿಸೋಜಾ ,ಬಸ್ತಿ ವಾಮನ್ ಶೆಣೈ ಕುಟುಂಬದ ಸದಸ್ಯರು, ಶಕುಂತಲಾ ಆರ್. ಕಿಣಿ, ಆಡಳಿತಾಧಿಕಾರಿ ಡಾ.ಬಿ.ದೇವದಾಸ ರೈ ಉಪಸ್ಥಿತರಿದ್ದರು. ಸುಚಿತ್ರಾ ಶೆಣೈ ಸಮ್ಮಾನಿತರ ವಿವರ ನೀಡಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಕೊಚ್ಚಿ, ಗೋವಾ, ಮುಂಬೈ, ಕಾಸರಗೋಡಿನ ರಂಗ ತಂಡಗಳ ಒಟ್ಟು ನಾಲ್ಕು ರಂಗಪ್ರದರ್ಶನಗಳು, ಕೊಂಕಣಿ ಗೀತೆಗಳ ನಾಟಕೋತ್ಸವ ಜರುಗಿತು.