ದೇಶದ ಪರಂಪರೆಯಲ್ಲಿ ವಿಶ್ವಕರ್ಮ ಸಮಾಜದ ಪಾತ್ರ ದೊಡ್ಡದು

| Published : Aug 19 2024, 12:46 AM IST

ದೇಶದ ಪರಂಪರೆಯಲ್ಲಿ ವಿಶ್ವಕರ್ಮ ಸಮಾಜದ ಪಾತ್ರ ದೊಡ್ಡದು
Share this Article
  • FB
  • TW
  • Linkdin
  • Email

ಸಾರಾಂಶ

ಭವಿಷ್ಯದ ಭಾರತ ನಿರ್ಮಾಣದಲ್ಲೂ ವಿಶ್ವಕರ್ಮರ ಪಾತ್ರ ದೊಡ್ಡದಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಾಡು ಹಾಗೂ ದೇಶದ ಪರಂಪರೆಯಲ್ಲಿ ದೊಡ್ಡ ಪಾತ್ರ ವಹಿಸಿರುವುದು ವಿಶ್ವಕರ್ಮ ಸಮಾಜ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯು ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭವಿಷ್ಯದ ಭಾರತ ನಿರ್ಮಾಣದಲ್ಲೂ ವಿಶ್ವಕರ್ಮರ ಪಾತ್ರ ದೊಡ್ಡದಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕು. ನಿಮ್ಮ ಪರವಾಗಿ ನಾನು ಧ್ವನಿಯಾಗಿ ಇರುತ್ತೇನೆ ಎಂದು ಅವರು ಭರವಸೆ ನೀಡಿದರು.

ಭಾರತವು ಪಾಶ್ಚಾತ್ಯ ದೇಶಗಳಿಗಿಂತಲೂ ಹೆಚ್ಚು ಅಭಿವೃದ್ಧಿ ಹೊಂದಬೇಕು. ಹಿಂದಿನಿಂದಲೂ ಹೇಳಿಕೊಂಡು ಬಂದಂತೆ ಬಡತನ ನಿವಾರಣೆಯೊಂದೇ ನಮ್ಮ ಸರ್ಕಾರದ ಗುರಿಯಲ್ಲ. ಅವರ ಜೀವನಮಟ್ಟವನ್ನು ಉತ್ತಮಪಡಿಸಲು ಪ್ರಧಾನಿ ಮೋದಿ ಗುರಿ ಹೊಂದಿದ್ದಾರೆ’ ಎಂದು ಹೇಳಿದರು.

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಬಾಲರಾಮನ ಮೂರ್ತಿ ಕೆತ್ತಿಕೊಟ್ಟ ನಮ್ಮ ಮೈಸೂರಿನವರೇ ಆದ ಅರುಣ್ ಯೋಗಿರಾಜ್ ಸೇರಿದಂತೆ ಶಿಲ್ಪಿಗಳು ನೀಡಿರುವ ಕೊಡುಗೆ ಮಹತ್ವದ್ದು ಎಂದು ಅವರು ಶ್ಲಾಘಿಸಿದರು.

ಸಾನ್ನಿಧ್ಯ ವಹಿಸಿದ್ದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ನಿಟ್ಟರಹಳ್ಳಿಯ ನೀಲಕಂಠಾಚಾರ್ಯ ಸ್ವಾಮೀಜಿ ಮಾತನಾಡಿ,‘ದೇಗುಲಗಳಲ್ಲಿ ಎಲ್ಲರೂ ಪೂಜಿಸುವ ಮೂರ್ತಿಗಳಿಗೆ ನೈಪುಣ್ಯತೆ ನೀಡುವ ಕೌಶಲ ಹೊಂದಿರುವ ಸಮಾಜ ನಮ್ಮದಾಗಿದೆ. ವಿಶ್ವಕರ್ಮ ಸಮಾಜಕ್ಕೂ ಹಾಗೂ ಮೈಸೂರು ರಾಜಮನೆತನಕ್ಕೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ, ಅರಮನೆಯಲ್ಲಿ ನಡೆಯುವ ದಸರಾ ಕಾರ್ಯಕ್ರಮದ ವೇಳೆ ವಿಶ್ವಕರ್ಮ ಸಮಾಜದ ಗುರುಗಳನ್ನು ಆಹ್ವಾನಿಸಬೇಕು; ನಮ್ಮ ಸಮಾಜದ ಸಾಧಕರನ್ನು ಆಹ್ವಾನಿಸಿ ಗೌರವಿಸಬೇಕು ಎಂದು ಯದುವೀರ್ಅವರನ್ನು ಕೋರಿದರು.

ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಪಾಲ್ಗೊಳ್ಳಬೇಕು. ನಮ್ಮ ಕುಲಕಸುಬನ್ನು, ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು ಎಂದರು.

ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಶಿಲ್ಪಿ ಅರುಣ್ಯೋಗಿರಾಜ್, ‘ಬಿಗ್ಬಾಸ್’ ರಿಯಾಲಿಟಿ ಶೋ ವಿಜೇತ ಕಾರ್ತಿಕ್ ಮಹೇಶ್ ಹಾಗೂ ‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಅವರಿಗೆ ‘ವಿಶ್ವಕರ್ಮ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಚಿಭಾ ಪುರಸ್ಕಾರ ನೀಡಲಾಯಿತು.

ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್. ನಂದಕುಮಾರ್, ವೇದಿಕೆಯ ಅಧ್ಯಕ್ಷ ಕೆಂಡಗಣ್ಣ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ ಟಿ.ಎ. ಸಿದ್ದರಾಜು, ಅರುಣ್ ಯೋಗಿರಾಜ್ ತಾಯಿ ಸರಸ್ವತಿ, ನಗರ ಪಾಲಿಕೆ ಮಾಜಿ ಸದಸ್ಯ ರಮಣಿ, ಕೆಪಿಸಿಸಿ ಒಬಿಸಿ ಘಟಕದ ಉಪಾಧ್ಯಕ್ಷ ಪವಿತ್ರಾ ಪ್ರಭಾಕರ್ ರೆಡ್ಡಿ, ಮುಖಂಡರಾದ ವೆಂಕಟೇಶ್, ಕುಮಾರ್, ಗೌರೀಶ್, ಬಸವರಾಜ್, ಶಿವಣ್ಣ ಹಾಗೂ ವೇದಿಕೆಯ ಪದಾಧಿಕಾರಿಗಳು ಇದ್ದರು.