ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಸಮಾಜದಲ್ಲಿ ನಾವು ಮಾಡುವ ಕೆಲಸ, ಕಾರ್ಯಗಳಿಗೆ ಪ್ರಶಸ್ತಿಗಳು, ಪುರಸ್ಕಾರಗಳು ಬಂದಾಗ ನಮಗೆ ಸಮಾಜದಲ್ಲಿ ಕೆಲಸ ಮಾಡಲು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಜೀವಮಾನ ಸಾಧನಾ ಪ್ರಶಸ್ತಿ ಪುರಸ್ಕೃತ ಮುತ್ಸಂದ್ರ ಎಂ.ಎ. ಕೃಷ್ಣಾರೆಡ್ಡಿ ತಿಳಿಸಿದರು.ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಜೀವಮಾನ ಸಾಧನಾ ಪ್ರಶಸ್ತಿ ಧಕ್ಕಿದ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರಾಜ್ಯ ರೆಡ್ಡಿ ಸಂಘದ ನಿರ್ದೇಶಕನಾಗಿ, ಸಮಾಜ ಸೇವಕನಾಗಿ ದಶಕಗಳಿಂದ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ದೇನೆ. ಅಲ್ಲದೆ ನಮ್ಮ ಪತ್ನಿ ಇಂದೂಮತಿ ಕೃಷ್ಣಾರೆಡ್ಡಿಯವರು ತಾಲೂಕು ಪಂಚಾಯಿತಿ ಸದಸ್ಯರಾದ ಸಂದರ್ಭದಲ್ಲಿ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದ ಜೊತೆ ಜೊತೆಗೆ ವೈಯಕ್ತಿಕವಾಗಿಯೂ ಸಹ ಸಾಕಷ್ಟು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಜೀವಮಾನ ಸಾಧನಾ ಪ್ರಶಸ್ತಿ ಜೊತೆಗೆ ಚಿನ್ನದ ಪದಕವನ್ನು ಸಹ ನೀಡಿ ಗೌರವಿಸಿದೆ. ಇದರಿಂದ ನನಗೆ ಮತ್ತಷ್ಟು ಜವಾಬ್ದಾರಿಯನ್ನು ಹೆಗಲಿಗೆ ಹಾಕಿದಂತಾಗಿದೆ ಎಂದರು.ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಎಂ.ಆರ್. ಉಮೇಶ್ ಮಾತನಾಡಿ, ವೈಜ್ಞಾನಿಕ ಸಂಶೋಧನಾ ಪರಿಷತ್ ವಿಜ್ಞಾನದ ಚಿಂತನೆಗಳನ್ನು ಬಿತ್ತುವುದರ ಜೊತೆ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಮೆರಯುತ್ತಿದೆ. ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಮಾಜದ ಸಾಧಕರನ್ನು ಸಹ ಗುರುತಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜದಲ್ಲಿ ಸಾಮಾಜಿಕ ಕಾರ್ಯ ಮಾಡುವ ಅಸಂಖ್ಯಾತ ಸಾಧಕರು ಜನರ ನಡುವೆಯೇ ಇದ್ದು ಅವರನ್ನು ಗುರುತಿಸಿ ಪುರಸ್ಕರಿಸುವ ಕಾರ್ಯವನ್ನು ವೈಜ್ಞಾನಿಕ ಸಂಶೋಧನಾ ಪರಿಷತ್ ಪ್ರತಿವರ್ಷ ನಿರಂತರವಾಗಿ ಮಾಡಲಿದೆ ಎಂದರು. ಮುಖಂಡರಾದ ಶಿವಪ್ರಕಾಶ್, ವೈಜ್ಞಾನಿಕ ಸಂಶೋಧನಾ ಪರಿಷತ್ ತಾಲೂಕು ಅಧ್ಯಕ್ಷ ತರಬಹಳ್ಳಿ ಹರೀಶ್, ಹೊಸಕೋಟೆ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಸ್.ಸಿ. ಮಂಜುನಾಥ್, ಕಾರ್ಯದರ್ಶಿ ಸೂಲಿಬೆಲೆ ಮಂಜುನಾಥ್, ಖಜಾಂಚಿ ಮಲ್ಲಸಂದ್ರ ಮಹೇಶ್ ಆರಾಧ್ಯ, ಪೊಲೀಸ್ ಇನ್‌ಸ್ಪೆಕ್ಟರ್ ಹರೀಶ್ ರೆಡ್ಡಿ ಹಲವರು ಹಾಜರಿದ್ದರು.