ಸಾರಾಂಶ
ಕೊಪ್ಪ ಕಸಾಪದಿಂದ ರಾಜ್ಯ ಪ್ರಶಸ್ತಿ ಶಿಕ್ಷಕರಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಕೊಪ್ಪ
ಯಾವುದೇ ಕ್ಷೇತ್ರದಲ್ಲಿ ಪ್ರಾಮಾಣಿಕ ಪ್ರಯತ್ನದ ಸಾಧನೆ ಇದ್ದಾಗ ಯಾವುದೇ ಲಾಭಿ, ಶಿಫಾರಸ್ಸುಗಳಿಲ್ಲದೆ ಗೌರವಗಳು, ಪ್ರಶಸ್ತಿಗಳು ಸಾಧಕರನ್ನು ಹುಡುಕಿ ಬರುತ್ತದೆ. ಅಂತೆಯೇ ಈ ಬಾರಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಅರ್.ಡಿ.ರವೀಂದ್ರರಿಗೆ ದೊರೆತಿರುವುದು ನಾಡು-ನುಡಿಗೆ ಸಂದ ಗೌರವವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜೆ.ಎಂ ಶ್ರೀಹರ್ಷ ಹೇಳಿದರು.ಸೋಮವಾರ ಕಸಾಪ ತಂಡದೊಂದಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರವೀಂದ್ರರವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು, ರವೀಂದ್ರರವರು ಇದುವರೆಗೂ ರಾಜ್ಯ ಹಂತದಲ್ಲಿ ಶಿಕ್ಷಣ ಇಲಾಖೆಗೆ ನೂರಕ್ಕೂ ಹೆಚ್ಚು ಸಾಹಿತ್ಯಗಳನ್ನು ರಚಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ನುಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧಾನಸಭಾ ಬೆಂಗಳೂರು ವತಿಯಿಂದ ಕಳೆದ ಎರಡು ವರ್ಷಗಳಿಂದ 25 ರಾಷ್ಟ್ರಗಳ ಅನಿವಾಸಿ ಕನ್ನಡಿಗರು ಮತ್ತು ಕನ್ನಡದಲ್ಲಿ ಆಸಕ್ತಿ ಹೊಂದಿದ ವಿದೇಶೀಯರಿಗೆ ಕನ್ನಡ ಭಾಷೆ ಕಲಿಸುವ ತರಬೇತಿ ನೀಡುತ್ತಿದ್ದಾರೆ. ಹಾಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎರಡು ಪಠ್ಯಪುಸ್ತಕ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕೊಪ್ಪ ಕಸಾಪದ ಗೌರವ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೊಪ್ಪ ಕಸಾಪ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಎಚ್.ಎಸ್. ಇನೇಶ್, ಚಂದ್ರಕಲಾ, ಹಾಲಿ ಕಾರ್ಯದರ್ಶಿ ನವೀನ್, ನಗರ ಘಟಕ ಅಧ್ಯಕ್ಷ ಜಾಸ್ಮಿನ್, ಶಿಕ್ಷಕರಾದ ಸುಖೇಶ್, ನಾಗರಾಜ್, ಶಿಕ್ಷಣ ಇಲಾಖೆಯ ಸುಚಿಶ್ಚಂದ್ರ, ಎಂ.ಆರ್. ರಮೇಶ್ ಮುಂತಾದವರು ಇದ್ದರು.