ಪದವೀಧರರ ಸಮಸ್ಯೆ ಬಗ್ಗೆ ಅರಿವಿದೆ: ಡಾ.ಸರ್ಜಿ

| Published : May 19 2024, 01:48 AM IST

ಸಾರಾಂಶ

ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ವರಿಷ್ಠರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೂ.3ರಂದು ಚುನಾವಣೆ ನಡೆಯಲಿದೆ. ನನ್ನ ಜೊತೆಗೆ ನಿಷ್ಠಾವಂತ ಕಾರ್ಯಕರ್ತರ ಪಡೆ ಇದ್ದು, ನಾಯಕರು ಮಾರ್ಗದರ್ಶನ ಮಾಡುತ್ತಿದ್ದಾರೆ. ನಾನು ವೈದ್ಯನಾದರೂ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಈ ಎಲ್ಲಾ ಕಾರಣಗಳಿಂದ ನನ್ನ ಗೆಲುವು ಖಚಿತ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾನು 10 ವರ್ಷದ ಬಾಲ್ಯದಿಂದಲೇ ಆರ್‌ಎಸ್‌ಎಸ್‌ ಸೇರಿ ಸೇವೆ ಮಾಡುತ್ತ ಬಂದಿದ್ದೇನೆ. ಪದವೀಧರರ ಸಮಸ್ಯೆ ಬಗ್ಗೆ ಸಾಕಷ್ಟು ಅರಿವಿದೆ. ನಾನು ಈ ಚುನಾವಣೆಯಲ್ಲಿ ಗೆದ್ದರೆ ಅವರ ಧ್ವನಿಯಾಗಿ ಕೆಲಸ ಮಾಡುವೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್‌ ಸರ್ಜಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ವರಿಷ್ಠರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೂ.3ರಂದು ಚುನಾವಣೆ ನಡೆಯಲಿದೆ. ನನ್ನ ಜೊತೆಗೆ ನಿಷ್ಠಾವಂತ ಕಾರ್ಯಕರ್ತರ ಪಡೆ ಇದ್ದು, ನಾಯಕರು ಮಾರ್ಗದರ್ಶನ ಮಾಡುತ್ತಿದ್ದಾರೆ. ನಾನು ವೈದ್ಯನಾದರೂ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಈ ಎಲ್ಲಾ ಕಾರಣಗಳಿಂದ ನನ್ನ ಗೆಲುವು ಖಚಿತ ಎಂದರು.ನೈಋತ್ಯ ಪದವೀಧರ ಸುಶಿಕ್ಷಿತರ ಕ್ಷೇತ್ರ:

ವಿವಿಧ ಹಂತಗಳಲ್ಲಿ ಪದವೀಧರರ ಸಮಸ್ಯೆಗಳನ್ನು ಹತ್ತಿರದಿಂದ ಅರಿತುಕೊಂಡಿದ್ದೇನೆ, ನೈಋತ್ಯ ಪದವೀಧರ ಕ್ಷೇತ್ರವು 14 ಮೆಡಿಕಲ್ ಕಾಲೇಜು, 30 ಇಂಜಿನಿಯರಿಂಗ್ ಕಾಲೇಜು, 100ಕ್ಕಿಂತ ಹೆಚ್ಚು ದೊಡ್ಡ ದೊಡ್ಡ ವಿದ್ಯಾಸಂಸ್ಥೆಗಳ ಹೊಂದಿದ ಸುಶಿಕ್ಷಿತರ ಕ್ಷೇತ್ರ. ಈ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳ ಒಳಗೊಂಡಿದೆ. ಕ್ಷೇತ್ರದಲ್ಲಿ 85 ಸಾವಿರ ಮತದಾರರಿದ್ದು, ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ 27 ಸಾವಿರ ಮತದಾರರಿದ್ದಾರೆ, ನನ್ನ ಗೆಲುವಿಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪಕ್ಷದ ಹಿರಿಯರು ತೀರ್ಮಾನ ಕೈಗೊಂಡು ಡಾ.ಧನಂಜಯ ಸರ್ಜಿಯವರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ಎಲ್ಲ ಕಾರ್ಯಕರ್ತರು ಸೇರಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಮೋಹನ್ ರೆಡ್ಡಿ, ಮಾಲತೇಶ್, ನಾಗರಾಜ್, ದೀನದಯಾಳ್, ಮಂಜುನಾಥ್, ಶ್ರೀನಾಗ್ ಇದ್ದರು. ಪಕ್ಷದ ಹಿರಿಯರು ಮಾತನಾಡುತ್ತಾರೆ

ಪಕ್ಷದ ಮಾಜಿ ಶಾಸಕ ರಘುಪತಿ ಭಟ್ ಈ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ನಿಜ. ಆದರೆ, ಪಕ್ಷದ ಹಿರಿಯರು ಅವರ ಜೊತೆ ಮಾತನಾಡುತ್ತಿದ್ದಾರೆ. ಅವರು ಹಿರಿಯರು ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ.

ಡಾ.ಧನಂಜಯ್‌ ಸರ್ಜಿ, ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ