ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಅಗತ್ಯ: ಸರಸ್ವತಿ

| Published : Jan 26 2024, 01:48 AM IST

ಸಾರಾಂಶ

ಮಕ್ಕಳ ಹಕ್ಕುಗಳನ್ನು ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಜತೆಗೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಮಕ್ಕಳ ಹಕ್ಕುಗಳ ಗ್ರಾಮಸಭೆಯ ತುಂಬಾ ಅವಶ್ಯಕವಾಗಿದೆ.

ಕುರುಗೋಡು: ಮಕ್ಕಳ ಹಕ್ಕುಗಳ ಕುರಿತು ಎಲ್ಲರೂ ಜಾಗೃತರಾಗುವ ಜತೆಗೆ ಅವುಗಳ ರಕ್ಷಣೆಗೆ ಮುಂದಾಗಬೇಕು. ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ಅದರಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ತಾಲೂಕು ಅನುಗಾರ್ ಸರಸ್ವತಿ ಹೇಳಿದರು.

ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ವತಿಯಿಂದ ಶನಿವಾರ ನಡೆದ ಬಾಲ್ಯವಿವಾಹ ತಡೆ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಮಕ್ಕಳ ಹಕ್ಕುಗಳನ್ನು ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಜತೆಗೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಮಕ್ಕಳ ಹಕ್ಕುಗಳ ಗ್ರಾಮಸಭೆಯ ತುಂಬಾ ಅವಶ್ಯಕವಾಗಿದೆ ಎಂದರು.ಶಾಲೆ ಆವರಣದಿಂದ ಪ್ರಾರಂಭಗೊಂಡ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಡುಸಲಮ್ಮ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು. ಜಾಥಾದುದ್ದಕ್ಕೂ ಬಾಲ್ಯವಿವಾಹದಿಂದ ಎದುರಿಸಬೇಕಾದ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.

ಗ್ರಾಮ ಆರೋಗ್ಯ ತಾಲೂಕು ಸಂಯೋಜಕ ಶಿವಕುಮಾರ್ ಮಾತನಾಡಿ, ಆಧುನಿಕ ಯುಗದಲ್ಲಿ ಬದುಕುತ್ತಿರುವ ಜನರು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದರೂ ಬಾಲ್ಯವಿವಾಹದಂತ ಸಾಮಾಜಿಕ ಪಿಡುಗನ್ನು ಬೇರುಸಮೇತ ಕಿತ್ತುಹಾಕಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಬಾಲ್ಯವಿವಾಹಗಳು ಜರುಗಿದರೆ ಎರಡೂ ಕಡೆಯ ತಂದೆ ತಾಯಿ, ಸಹಕರಿಸಿದವರು, ಬಾಲಕ ಮತ್ತು ಬಾಲಕಿಯರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗುತ್ತದೆ. ಅದಕ್ಕೂ ಮುಖ್ಯವಾಗಿ ಬಾಲ್ಯಾವಸ್ಥೆಯಲ್ಲಿ ಗರ್ಭಿಣಿಯಾದರೆ ಪ್ರಾಣಾಪಾಯವಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.ನಿಮ್ಮ ಮನೆಯ ಸುತ್ತಮುತ್ತ ಅಥವಾ ಗ್ರಾಮಗಳಲ್ಲಿ ಬಲವಂತವಾಗಿ ಬಾಲ್ಯವಿವಾಹಗಳು ಜರುಗುವುದು ಕಂಡುಬಂದರೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದರೆ ಅವರು ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದರು.ಶಾಲೆಯ ಮುಖ್ಯ ಶಿಕ್ಷಕ ವಿ. ಗಂಗಾಧರರೆಡ್ಡಿ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಈ ದೇಶದ ಪ್ರಬುದ್ಧ ವ್ಯಕ್ತಿಗಳಾಗಬೇಕು. ಮಕ್ಕಳ ಗ್ರಾಮಸಭೆಗಳು, ಅವರಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ಶಿಕ್ಷಕ ಶಿವಕುಮಾರ್, ಮಂಜುಳಾ, ರೇಣುಕಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಶಿವಕುಮಾರ್ ಸವಿತಾ, ಕಾಸಿಂ ಸಾಬ್, ಕುಬೇರ್ ಸ್ವಾಮಿ ಇದ್ದರು.