ಸಾರಾಂಶ
ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯ ಸುವರ್ಣ ಗಂಗೋತ್ರಿಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಗ್ರಾಮಸ್ಥರಿಗೆ ಶಿಕ್ಷಣ, ಸ್ವಚ್ಚತೆ, ಶ್ರಮದಾನ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಚಾಮರಾಜನಗರ: ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯ ಸುವರ್ಣ ಗಂಗೋತ್ರಿಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಗ್ರಾಮಸ್ಥರಿಗೆ ಶಿಕ್ಷಣ, ಸ್ವಚ್ಚತೆ, ಶ್ರಮದಾನ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಧ್ವಜಾರೋಹಣ ನೆರವೇರಿಸಿ, ಬಳಿಕ ಗ್ರಾಮದ ಬೀದಿಗಳಲ್ಲಿ ಶಿಬಿರಾರ್ಥಿಗಳಿಂದ ಜಾಗೃತಿ ಜಾಥಾ ಏರ್ಪಡಿಸಿ ಜಾಗೃತಿ ಮೂಡಿಸುವ ಘೋಷಣೆಗಳನ್ನು ಮೊಳಗಿಸಿ ಗ್ರಾಮಸ್ಥರಿಗೆ ವ್ಯಾಪಕ ಅರಿವು ಮೂಡಿಸಿದರು.ವಿದ್ಯಾರ್ಥಿಗಳು ಸಂಜೆ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಗ್ರಾಮಸ್ಥರನ್ನು ಒಂದೆಡೆ ಕಲೆಹಾಕಿ ನಾಟಕ ಪ್ರದರ್ಶನ ಮೂಲಕ ಬಾಲ್ಯ ವಿವಾಹ ತಡೆಗಟ್ಟುವಿಕೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳು, ಶಿಕ್ಷಣದ ಮಹತ್ವ, ಮೌಢ್ಯತೆ, ಕಾನೂನಿನ ಅರಿವು, ಸರ್ಕಾರಿ ಸೌಲಭ್ಯಗಳ ಸದ್ಭಳಕೆ, ಮನುಷ್ಯ ಮನುಷ್ಯರ ನಡುವಿನ ಸ್ನೇಹ ಸಂಬಂಧಗಳ ಕುರಿತು ಜಾನಪದ, ಭಾವಗೀತೆ ಗೀತೆಗಳು, ಜಾನಪದ ನೃತ್ಯ ಪ್ರದರ್ಶನಗಳನ್ನು ಪ್ರದರ್ಶಿಸಿದರು.
ರೈತ ಮುಖಂಡರಾದ ಪ್ರೊ. ನಂಜುಂಡಸ್ವಾಮಿ ಸ್ಮಾರಕ ಇರುವ ಅಮೃತ ಭೂಮಿ, ಸರ್ಕಾರಿ ಶಾಲಾ ಆವರಣ, ಗ್ರಾಮದ ಪ್ರಮುಖ ಬೀದಿಗಳು, ಸರ್ಕಾರಿ ನವೋದಯ ಶಾಲಾ ಆವರಣದ ಸುತ್ತ ಮುತ್ತಲಿನ ಪ್ರದೇಶ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಎನ್.ಎಸ್.ಎಸ್ ಶಿಬಿರಾರ್ಥಿಗಳು ಸ್ವಚ್ಛಗೊಳಿಸಿದರು.