ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಶಿಕ್ಷಣಾಧಿಕಾರಿಗಳ ತಂಡ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಆರೋಗ್ಯ ಜೊತೆ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ್ ಹೇಳಿದರು.ತಾಲೂಕಿನ ಕೆ.ಶೆಟ್ಟಹಳ್ಳಿ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಿರಂಗೂರು ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಬಳಿ ಸಾರ್ವಜನಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾನದ ಮಹತ್ವ ತಿಳಿಸಿ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ತಪ್ಪದೆ ಎಲ್ಲರೂ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ನಂತರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ ಮಾತನಾಡಿ, ಜನರ ತೀರ್ಪು ಅಂತಿಮ. ಅದಕ್ಕಾಗಿ ಪ್ರತಿಯೊಬ್ಬರು ಮತದಾನ ಮಾಡಿ ಮತದಾನ ನಿಮ್ಮ ಹಕ್ಕು, ನಿಮ್ಮ ಅಮೂಲ್ಯ ಮತ ಚಲಾಯಿಸಿ. ನಿಮ್ಮ ಒಂದು ಮತ ದೇಶದ ಪ್ರಗತಿ ಹಿತ, ಪ್ರಜಾಪ್ರಭುತ್ವ ಎತ್ತಿ ಹಿಡಿಯೋಣ ಸಂಭ್ರಮಿಸೋಣ. ಮತ ಚಲಾಯಿಸಲು ನಾನು ಸಿದ್ಧನಾಗಿದ್ದೇನೆನೆ ನೀವು ಸಿದ್ದರಾಗಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.ಆರೋಗ್ಯ ನಿರೀಕ್ಷಣಾಧಿಕಾರಿ ಪಣಿಂದ್ರ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಬೇಸಿಗೆ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಅನಂತಲಕ್ಷ್ಮಿ, ಆಶಾಕಾರ್ಯಕರ್ತೆ ಸುನಂದ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.ಏ.10,16 ಹಾಗೂ 23 ರಂದು ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಪರಿಶೀಲನೆಮಂಡ್ಯ:ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣಾ ಪ್ರಚಾರದ ಅವಧಿಯಲ್ಲಿ (ನಾಮಪತ್ರ ಸಲ್ಲಿಕೆ ದಿನಾಂಕದಿಂದ ಫಲಿತಾಂಶ ಘೋಷಣೆ ದಿನಾಂಕದವರೆಗೆ) ಮಾಡುವ ವೆಚ್ಚಗಳ ವಿವರಗಳನ್ನು ನಾಮಪತ್ರ ಸಲ್ಲಿಕೆ ದಿನಾಂಕದಂದು ಒದಗಿಸಿರುವ ಭಾಗ ಎ, ಬಿ ಮತ್ತು ಸಿ ವಹಿಗಳಲ್ಲಿ ನಿರ್ವಹಿಸಿ 3 ಬಾರಿ ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟಿರುವ ಚುನಾವಣಾ ವೆಚ್ಚದ ವೀಕ್ಷಕರ ಪರಿಶೀಲನೆಗೆ ಒಳಪಡಿಸಬೇಕಾಗಿದೆ.
ಅಭ್ಯರ್ಥಿಗಳು ನಿರ್ವಹಿಸಿರುವ ಚುನಾವಣಾ ವೆಚ್ಚ ವಿವರದ ವಹಿಗಳನ್ನು ಚುನಾವಣಾ ವೆಚ್ಚ ವೀಕ್ಷಕರಾದ ರೋಹಿತ್ ಅಸ್ಸುದಾನಿ ಹಾಗೂ ಕುಮಾರ್ ಪ್ರಿಯತಮ್ ಅಶೋಕ್ ಅವರು ಏ.10 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೊದಲನೇ ಪರಿಶೀಲನೆ, ಏ.16 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಎರಡನೇ ಪರಿಶೀಲನೆ ಮತ್ತು ಏ.23 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೂರನೇ ಪರಿಶೀಲನೆಯನ್ನು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ 22 ರಲ್ಲಿ ನಡೆಸಲಿದ್ದಾರೆ.ಸದರಿ ದಿನಾಂಕಗಳಂದು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಭಾಗ ಎ, ಬಿ ಮತ್ತು ಸಿ ನಲ್ಲಿ ನಿರ್ವಹಿಸಿರುವ ವೆಚ್ಚ ವಹಿಗಳನ್ನು ತಪ್ಪದೇ ಚುನಾವಣಾ ವೆಚ್ಚ ವೀಕ್ಷಕರ ಪರಿಶೀಲನೆಗೆ ಹಾಜರುಪಡಿಸಲು ತಿಳಿಸಿದೆ. ತಪ್ಪಿದಲ್ಲಿ ನಿಯಮನುಸಾರ ಕ್ರಮ ವಹಿಸುವುದರ ಜೊತೆಗೆ ನೀಡಲಾಗಿರುವ ವಿವಿಧ ವಾಹನ ಅನುಮತಿಗಳನ್ನು ಹಿಂಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ. ಕುಮಾರ ತಿಳಿಸಿದ್ದಾರೆ.