ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಅರಿವು ಅಗತ್ಯ: ನ್ಯಾ. ಕೆ. ಎಂ. ಹರೀಶ್ ಸಲಹೆ

| Published : Nov 28 2024, 12:36 AM IST

ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಅರಿವು ಅಗತ್ಯ: ನ್ಯಾ. ಕೆ. ಎಂ. ಹರೀಶ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ವಧುವಿಗೆ 18 ವರ್ಷ ಪೂರೈಸಿರಬೇಕು. ವರನಿಗೆ 21 ವರ್ಷ ಪೂರೈಸಿದ್ದರೆ ಮಾತ್ರ ಮದುವೆಗೆ ಅರ್ಹರಾಗಿರುತ್ತಾರೆ. ಇದನ್ನು ಮನಗಂಡು ಪ್ರತಿಯೊಬ್ಬರೂ ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸಾಮಾಜಿಕ ಪಿಡುಗುಗಳಲ್ಲಿ ಬಾಲ್ಯ ವಿವಾಹ ಸಹ ಒಂದಾಗಿದ್ದು, ಬಾಲ್ಯ ವಿವಾಹ ಮಾಡುವುದರಿಂದ ಅನೇಕ ಸಮಸ್ಯೆಗಳು ಎದುರಾಗಲಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬಾಲ್ಯ ವಿವಾಹದ ಕುರಿತು ಅರಿವು ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಜೆಎಂಎಫ್ಸಿ ನ್ಯಾಯಾಧೀಶ ಕೆ.ಎಂ.ಹರೀಶ್ ಸಲಹೆ ನೀಡಿದರು.

ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ನಿಮಿತ್ತ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಪಡೆಯಬೇಕಾದ ವಯಸ್ಸಿನಲ್ಲಿ ಮಕ್ಕಳಿಗೆ ವಿವಾಹ ಮಾಡುವುದರಿಂದ ಬಾಲ್ಯ ಜೀವನ ಕಳೆದುಕೊಳ್ಳುತ್ತಾರೆ. ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಅವರ ಜೀವನ ದುಃಖದಲ್ಲಿ ಮುಕ್ತಾಯವಾಗುತ್ತದೆ. ಮತ್ತೊಂದು ಕಡೆ ಅಪ್ರಾಪ್ತರಿಗೆ ವಿವಾಹ ಮಾಡಿಸಿದವರು ಜೈಲುಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ, ಕುಟುಂಬವು ಸಮಸ್ಯೆಗೆ ಒಳಗಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಮಕ್ಕಳು ವಿಕಲಚೇತನರಾಗಿ ಜನಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಮಾನಸಿಕ ಸ್ಥೈರ್ಯ ಕಳೆದು ಕೊಳ್ಳುವುದಲ್ಲದೇ, ಶಿಕ್ಷಣದಿಂದ ವಂಚಿತರಾಗುತ್ತಾರೆ. ಬಾಲ್ಯ ವಿವಾಹ ಪ್ರಕರಣಗಳ ಸುಳಿವು ಸಿಕ್ಕಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ನಂತರ ಜೀವಿಕ ನಾರಾಯಣಸ್ವಾಮಿ ಮಾತನಾಡಿ, ವಧುವಿಗೆ 18 ವರ್ಷ ಪೂರೈಸಿರಬೇಕು. ವರನಿಗೆ 21 ವರ್ಷ ಪೂರೈಸಿದ್ದರೆ ಮಾತ್ರ ಮದುವೆಗೆ ಅರ್ಹರಾಗಿರುತ್ತಾರೆ. ಇದನ್ನು ಮನಗಂಡು ಪ್ರತಿಯೊಬ್ಬರೂ ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ರಾಮನಾಥ್ ರೆಡ್ಡಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಕಾನೂನಿನ ವಿಚಾರಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಶಾರದಾ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟುವ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಸಹಾಯಕ ಸರ್ಕಾರಿ ಅಭಿಯೋಜಕ ರಾಮಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ವಕೀಲರ ಸಂಘದ ಉಪಾಧ್ಯಕ್ಷ ನಂದೀಶ್ವರ ರೆಡ್ಡಿ, ವಕೀಲರಾದ ಮಹೇಶ್, ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಸಿ.ಎಲ್.ವೆಂಕಟೇಶ್ ಮತ್ತು ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.