ಕನ್ನಡಪ್ರಭ ವಾರ್ತೆ ಮಂಡ್ಯ

ತಾಯಿ ಹಾಲಿಗೆ ಪರ್ಯಾಯ ಮತ್ತೊಂದಿಲ್ಲ. ಅದಕ್ಕಿಂತ ಪೌಷ್ಟಿಕಾಂಶಯುಕ್ತ ಹಾಲು ಬೇರೊಂದಿಲ್ಲ. ತಾಯಿ ಹಾಲಿನ ಮಹತ್ವ ಮತ್ತು ಅದನ್ನು ದಾನವಾಗಿ ನೀಡುವ ಬಗ್ಗೆ ತಾಯಂದಿರಲ್ಲಿ ಜಾಗೃತಿ ಮೂಡಿಸುವ ಅವಶ್ಯವಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ತಾಯಿ ಹಾಲು ಬ್ಯಾಂಕ್, ಸಹಜ ಹೆರಿಗೆ ಆರೈಕೆ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿ, ಹೆರಿಗೆಯಾದ ನಂತರದಲ್ಲಿ ಎಷ್ಟೋ ತಾಯಂದಿರಲ್ಲಿ ಹಾಲಿನ ಕೊರತೆ ಕಾಡುತ್ತದೆ. ಶಿಶುಗಳಿಗೆ ಅಗತ್ಯವಿರುವಷ್ಟು ಹಾಲು ದೊರಕುವುದಿಲ್ಲ. ಇನ್ನೂ ಹಲವು ತಾಯಂದಿರಲ್ಲಿ ಮಗುವಿಗೆ ಸಾಕಾಗಿ ಉಳಿಯುವಷ್ಟು ಹಾಲಿರುತ್ತದೆ. ಈ ಹೆಚ್ಚುವರಿ ಹಾಲನ್ನು ನೀಡುವ ಕುರಿತಂತೆ ತಾಯಂದಿರ ಮನವೊಲಿಸಿ ಮಾರ್ಗದರ್ಶನ ನೀಡಬೇಕು. ಹಾಲು ವ್ಯರ್ಥವಾಗಲು ಬಿಡಬಾರದು. ಹಾಲನ್ನು ದಾನವಾಗಿ ನೀಡುವುದರಿಂದ ಆರೋಗ್ಯಕ್ಕೆ ಯಾವ ಅಪಾಯವೂ ಇಲ್ಲ. ಹೆಚ್ಚುವರಿ ಹಾಲು ಎದೆಯಲ್ಲಿ ಉಳಿಯುವುದರಿಂದ ಆರೋಗ್ಯ ಕೆಡುತ್ತದೆ. ಅದನ್ನು ದಾನವಾಗಿ ನೀಡಿದರೆ ಹಾಲಿನ ಕೊರತೆ ಎದುರಿಸುತ್ತಿರುವ ಮಕ್ಕಳಿಗೆ ಅಮೃತಪಾನ ನೀಡಿದಂತಾಗುತ್ತದೆ ಎಂದು ಮನವರಿಕೆ ಮಾಡಬೇಕು ಎಂದರು.

ತಾಯಿ ಒಂದು ಮಗುವನ್ನು ಒಂಬತ್ತು ತಿಂಗಳು ಹೊತ್ತು ಆರೋಗ್ಯವಂತ ಮಗುವನ್ನು ಸಮಾಜಕ್ಕೆ ನೀಡುವ ಪ್ರಕ್ರಿಯೆ ಅತಿ ಮಹತ್ವವಾದುದು. ಇದರಲ್ಲಿ ತಾಯಿಯ ಜವಾಬ್ದಾರಿ, ಅನುಭವಿಸುವ ನೋವುಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವುದು ಎಲ್ಲರ ಕರ್ತವ್ಯ. ಅದಕ್ಕೆ ಪೂರಕವಾದ ಎಲ್ಲ ಸೌಲಭ್ಯ, ವ್ಯವಸ್ಥೆಗಳನ್ನು ಮಾಡುವ ಅಗತ್ಯವಿದೆ ತಿಳಿಸಿದರು.

ತಾಯಿ ಹಾಲಿನ ಬ್ಯಾಂಕ್‌ಗೆ ಇನ್ನಷ್ಟು ಉಪಕರಣಗಳನ್ನು ಅಳವಡಿಸಬೇಕಿದೆ. ಅದು ಸರ್ಕಾರದ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಅದು ಬರುವುದು ವಿಳಂಬವಾದರೆ ನಾನೂ ಸೇರಿದಂತೆ ಶಾಸಕರೆಲ್ಲರೂ ಸಿಎಸ್‌ಆರ್ ಅನುದಾನದಿಂದ ಉಪಕರಣಗಳನ್ನು ತರಿಸಲಾಗುವುದು ಎಂದು ನುಡಿದರು.


ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ವಾಣಿ ವಿಲಾಸ ಆಸ್ಪತ್ರೆಯ ಗರ್ಭಿಣಿ ಮತ್ತು ಸ್ತ್ರೀರೋಗ ವಿಭಾಗದ ಡಾ.ಸವಿತಾ, ಮಿಮ್ಸ್ ಪ್ರಾಂಶುಪಾಲ ಡಾ.ಹನುಮಂತಪ್ರಸಾದ್, ಮಕ್ಕಳ ತಜ್ಞ ಡಾ.ಬಿ.ಜೆ.ಕೀರ್ತಿ, ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞ ಡಾ.ಮನೋಹರ್ ಇತರರಿದ್ದರು.

ಸಾಮಾನ್ಯರಿಗೂ ಉತ್ತಮ ಸೌಲಭ್ಯ ಸಿಗಲೆಂಬ ಆಶಯ: ಕೆ.ಆರ್.ನಂದಿನಿ

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯರಿಗೆ ಅತ್ಯುತ್ತಮವಾದ ವೈದ್ಯಕೀಯ ಸೌಲಭ್ಯಗಳು ಸಿಗಬೇಕೆಂಬ ಆಶಯದೊಂದಿಗೆ ಸಹಜ ಹೆರಿಗೆ ಘಟಕವನ್ನು ತೆರೆಯಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿದರು.

ತಾಯಿ ಮತ್ತು ಮಗುವಿನ ಆರೋಗ್ಯ ಸಮಾಜದ ಭದ್ರ ಬುನಾದಿಯಾಗಿದೆ. ಯಾವ ದೇಶ ತಾಯಿ-ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವುದೋ ಆ ದೇಶ ಪ್ರಗತಿದಾಯಕ ರಾಷ್ಟ್ರ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವನ್ನು ನಿಯಂತ್ರಣದಲ್ಲಿಡಬೇಕಾದರೆ ಉತ್ತಮ ಆರೈಕೆ, ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಅಗತ್ಯವಿದೆ ಎಂದರು.

ತಾಯಿ ಮತ್ತು ಮಗುವಿನನ ಸಾವಿಗೆ ಕಾರಣವಾಗುವ ಅಂಶಗಳ ಕುರಿತಂತೆ ತಜ್ಞ ವೈದ್ಯರಿಂದ ಮಾಹಿತಿ ಪಡೆದು ವಿಸ್ತೃತ ಚರ್ಚೆ ನಡೆಸಿ ಸ್ವಂತ ಅನುಭವದ ಆಧಾರದ ಮೇಲೆ ತಾಯಿ ಹಾಲು ಬ್ಯಾಂಕ್ ಮತ್ತು ಸಹಜ ಹೆರಿಗೆ ಘಟಕವನ್ನು ತೆರೆಯಲಾಗಿದೆ. ಎಂಟರಿಂದ ಹತ್ತು ತಿಂಗಳ ಹಿಂದೆ ಯೋಜನೆ ರೂಪದಲ್ಲಿದ್ದದ್ದು ಇದೀಗ ಕಾರ್ಯಗತಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲೆಯ ಸಚಿವರು ಹಾಗೂ ಶಾಸಕರೆಲ್ಲರೂ ಈ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಬೆಂಬಲವಾಗಿ ನಿಂತು ಅನುದಾನವನ್ನು ನೀಡಿದ್ದಾರೆ. ಅತಿ ವೇಗವಾಗಿ ಯೋಜನೆ ಕಾರ್ಯಗತಗೊಳ್ಳುವುದಕ್ಕೆ ತುಂಬು ಹೃದಯದ ಸಹಕಾರ ನೀಡಿರುವುದಾಗಿ ನೆನಪಿಸಿಕೊಂಡರು.