ಅಂಗಾಂಗ ದಾನದ ಕುರಿತು ಜಾಗೃತಿ ಅಗತ್ಯ

| Published : Aug 14 2024, 12:45 AM IST

ಸಾರಾಂಶ

ಅಂಗಾಂಗ ದಾನದಂತಹ ಉದಾತ್ತ ವಿಷಯವನ್ನಿಟ್ಟುಕೊಂಡು ಕಾರ್ಯದ ಬಗ್ಗೆ ಮೆಚ್ಚುಗೆ

ಗದಗ: ದಾನಗಳಲ್ಲಿಯೇ ಅಂಗಾಂಗ ದಾನ ಅತ್ಯಂತ ಪವಿತ್ರವಾದದ್ದು, ಇದರ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಅವಶ್ಯಕ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಮಂಗಳವಾರ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಐಎಂಎ, ಜಿಮ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಾಯನ್ಸ್ ಕ್ಲಬ್ ಹಾಗೂ ನಗರದ ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ವಿಶ್ವ ಅಂಗಾಂಗ ದಿನಾಚರಣೆ ನಿಮಿತ್ತ ಕಾಲ್ನಡಿಗೆ ಹಾಗೂ ಸೈಕಲ್ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ವೈದ್ಯರೆಲ್ಲರೂ ಕೂಡಿಕೊಂಡು ವಿಶ್ವ ಅಂಗಾಂಗ ದಿನ ಆಚರಿಸುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಷಯ. ಅಂಗಾಂಗ ದಾನದಂತಹ ಉದಾತ್ತ ವಿಷಯವನ್ನಿಟ್ಟುಕೊಂಡು ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆ, ರಾಜ್ಯ ಸೇರಿ ದೇಶದಲ್ಲಿ ಅಂಗಾಂಗಗಳ ಅಗತ್ಯ ಇದ್ದೇ ಇದೆ. ನಮ್ಮೆಲ್ಲರಿಗೂ ಗೊತ್ತಿದ್ದ ಹಾಗೇ ಕಳೆದ 25 ವರ್ಷಗಳ ಹಿಂದೆ ರಕ್ತದಾನಕ್ಕೂ ಕೊರತೆಯಾಗುವಂತಹ ಪರಿಸ್ಥಿತಿ ಇತ್ತು. ಸಧ್ಯ ಜನರು ಜಾಗೃತರಾಗಿದ್ದು ಇಂದು ರಕ್ತದಾನ ಶಿಬಿರ ಸೇರಿ ರಕ್ತ ಭಂಡಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡುತ್ತಿದ್ದಾರೆ.

ರಕ್ತದಾನ ಹಾಗೇ ಅಂಗಾಂಗ ದಾನ ಅತ್ಯಂತ ಪವಿತ್ರ ದಾನಗಳಲ್ಲೊಂದಾಗಿದೆ. ಅದನ್ನು ಜಾಗೃತಿಗೊಳಿಸಲು ಯುವಕರನ್ನು ಒಟ್ಟುಗೂಡಿಸಿರುವುದು ಸಂತಸದ ವಿಷಯವಾಗಿದೆ. ಇಲ್ಲಿ ಸೇರಿರುವ ಎಲ್ಲರೂ ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಅನುಕೂಲವಾಗುವಂತೆ ಪ್ರೇರೇಪಿಸುವ ಕೆಲಸವಾಗಬೇಕು ಎಂದರು.

ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ಸಚಿವರು ವೈದ್ಯರು ಹಾಗೂ ಶಾಲಾ,ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಕಾಲ್ನಡಿಗೆಯಲ್ಲಿ ಪಾಲ್ಗೊಂಡರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಎಸ್ಪಿ ಬಿ.ಎಸ್. ನೇಮಗೌಡ, ಡಿಎಚ್‌ಒ ಡಾ.ಎಸ್.ಎಸ್. ನೀಲಗುಂದ, ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ಅವಿನಾಶ ಓದುಗೌಡರ ಸೇರಿ ನಗರದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು, ಅವಳಿ ನಗರದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.