ಸಾರಾಂಶ
ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಅರಿವು ಮೂಡಿಸಲಾಯಿತು.
ಕೊಪ್ಪಳ:
ನಗರದ ಗವಿಸಿದ್ಧೇಶ್ವರ ಜಾತ್ರೆ ನಿಮಿತ್ತ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಧ್ವನಿ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಅರಿವು ಮೂಡಿಸಲಾಯಿತು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, ಬಾಲ್ಯವಿವಾಹದಿಂದ ಅಪ್ರಾಪ್ತರು ತಾಯಂದಿರಾಗುವುದರಿಂದ ಇವರಿಗೆ ಜನಿಸುವ ಮಗುವಿನ ಬೌದ್ಧಿಕ, ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಭಾಷಾ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರೊಂದಿಗೆ ಬೆಳವಣಿಗೆ ಕುಂಠಿತವಾಗುತ್ತದೆ. ಈ ಎಲ್ಲ ದುಷ್ಪರಿಣಾಮಗಳನ್ನು ತಡೆಗಟ್ಟಲು ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ-2016ನ್ನು ಜಾರಿಯಲ್ಲಿ ತಂದಿದೆ ಎಂದರು.
ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಹಲವಾರು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಬಾಲ್ಯವಿವಾಹಕ್ಕೆ ಸಿದ್ಧತೆ ಅಥವಾ ಪ್ರಯತ್ನಿಸಿದರೂ ಸಹ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಮಕ್ಕಳ ಮದುವೆ ದಿನ ನಿಶ್ಚಯಿಸಿದ್ದಲ್ಲಿಯೂ ಸಹ ಪ್ರಕರಣ ದಾಖಲಿಸಲಾಗುವುದು ಎಂದರು.ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ಆಂಜನೇಯ ಮಾತನಾಡಿದರು.
ಈ ಸಂದರ್ಭ ಕೊಪ್ಪಳ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಶರಣಪ್ಪ, ಮಹಿಳಾ ಧ್ವನಿ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಪ್ರಿಯದರ್ಶಿನಿ ಮುಂಡರಗಿ ಮಠ, ಡಾ. ಬಿ.ಎನ್. ಹೊರಪೇಟಿ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098, ಮಹಿಳಾ ಪೊಲೀಸ್ ಠಾಣೆಯ ಹಾಗೂ ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು.